'ಪ್ರಣಯಂ' ಮೂಲಕ ನೈನಾ ಗಂಗೂಲಿ ಸ್ಯಾಂಡಲ್ ವುಡ್ ಪ್ರವೇಶ; ರಾಜವರ್ಧನ್ ಗೆ ನಾಯಕಿ
ಬಂಗಾಳಿ, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಹೆಸರು ಮಾಡಿರುವ ನಟಿ ನೈನಾ ಗಂಗೂಲಿ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಪಿ2 ಪ್ರೊಡಕ್ಷನ್ ನಡಿ ರೊಮ್ಯಾಂಟಿಕ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಕನ್ನಡಕ್ಕೆ ಅವರು ಬರುತ್ತಿರುವುದು ಪ್ರಣಯಂ ಚಿತ್ರದ ಮೂಲಕ. ನಾಯಕ ರಾಜವರ್ಧನ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಿಚ್ಚುಗತ್ತಿ ಚಾಪ್ಟರ್ 1-ದಳವಾಯಿ ದಂಗೆಯ ನಾಯಕ ನಟ ರಾಜವರ್ಧನ್ ಅವರಿಗೆ ಇದು ಎರಡನೇ ಸಿನೆಮಾವಾಗಿದ್ದು, ನೈನಾ ಅವರಿಗೆ ಕನ್ನಡ ಚಿತ್ರರಂಗ ಹೊಸದು.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿರುವ ನಟಿ, ನಟ ರಾಜವರ್ದನ್ ಮತ್ತು ಹೊಸ ನಿರ್ದೇಶಕ ದತ್ತಾತ್ರೇಯ ಅವರೊಂದಿಗೆ ನನ್ನ ಮುಂಬರುವ ಚಿತ್ರವಾಗಿದ್ದು, ಸ್ಕ್ರಿಪ್ಟ್ ಓದುವ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. 15 ದಿನಗಳ ಶೆಡ್ಯೂಲ್ ನೊಂದಿಗೆ ಇನ್ನೊಂದೆರಡು ದಿನಗಳಲ್ಲಿ ಚಿತ್ರೀಕರಣ ಆರಂಭಿಸುತ್ತೇವೆ ಎಂದಿದ್ದಾರೆ.
ಪಿ2 ಪ್ರೊಡಕ್ಷನ್ ನಡಿ ಪರಮೇಶ್ ಅವರು ಬಂಡವಾಳ ಹೂಡುತ್ತಿದ್ದು ಅವರು ಈ ಹಿಂದೆ ಅಂಬಾರಿ, ಪಲ್ಲಕ್ಕಿ, ಪಾರಿಜಾತ, ಓ ಗುಲಾಬಿ, ಗಣಪ ಮತ್ತು ಕರಿಯ 2 ಗೆ ಬಂಡವಾಳ ಹೂಡಿದ್ದರು. ಪ್ರಣಯಂ ಮೂಲಕ ಸಂಗೀತ ನಿರ್ದೇಶನಕ್ಕೆ ಮುಂಗಾರು ಮಳೆ ಸಂಗೀತ ನಿರ್ದೇಶಕ ಮನೋಮೂರ್ತಿ ಪುನರಾಗಮನ ಮಾಡುತ್ತಿದ್ದಾರೆ. ನಾಗೇಶ್ ಆಚಾರ್ಯ ಛಾಯಾಗ್ರಾಹಕರಾಗಿರುತ್ತಾರೆ.
ನಾನು ಮೂಲತಃ ಬಂಗಾಳಿಯಾಗಿರುವುದರಿಂದ, ದಕ್ಷಿಣ ಭಾರತದ ಭಾಷೆಗಳು ನನಗೆ ಸವಾಲಾಗಿವೆ. ಇದು ನನಗೆ ಕನ್ನಡದಲ್ಲಿ ಹೊಸ ಅನುಭವ ನೀಡಲಿದೆ. ಅದೃಷ್ಟವಶಾತ್, ನಿರ್ಮಾಪಕ, ನಿರ್ದೇಶಕ ಮತ್ತು ನಾಯಕ ರಾಜವರ್ದನ್ ಕನ್ನಡ ಸಂಭಾಷಣೆಗಳಿಗೆ ನನಗೆ ಸಹಾಯ ಮಾಡುತ್ತಿದ್ದಾರೆ ಎಂದರು.
ಪ್ರಣಯಂ ನನಗೆ ಒಂದು ತಾಜಾ ಕಥೆಯಾಗಿದೆ, ಇದು ಕೌಟುಂಬಿಕ ಸಿನೆಮಾವಾಗಿದ್ದು ಪ್ರತಿಭೆ ಹೊರಹಾಕಲು ಉತ್ತಮ ಅವಕಾಶವಿದೆ ಎನ್ನುವ ನೈನಾ ರಾಮ್ ಗೋಪಾಲ್ ವರ್ಮಾ ಅವರ ಗರಡಿಯಲ್ಲಿ ಬೆಳೆದವರು.
ರಾಮ್ ಗೋಪಾಲ್ ವರ್ಮ ಅವರ ತಂಡ ಶಾಲೆಯಿದ್ದಂತೆ. ಅವರು ಎಲ್ಲಾ ಹೊಸಬರಿಗೆ ಅವಕಾಶಗಳನ್ನು ನೀಡುತ್ತಾರೆ ಸಿನಿಮಾ ಹಿನ್ನೆಲೆಯಿಲ್ಲದ ಕಲಾವಿದರನ್ನು ಪ್ರೋತ್ಸಾಹಿಸುತ್ತಾರೆ. ಅವರ ಬಗ್ಗೆ ಹೇಳಲು ಗಂಟೆಗಟ್ಟಲೆ ವಿಷಯಗಳಿವೆ. ಕೆಲವು ವಾಕ್ಯಗಳಿಗೆ ಅವರನ್ನು ಸೀಮಿತಗೊಳಿಸುವುದು ಕಷ್ಟ. ಅವರ ಮಾರ್ಗದರ್ಶನದಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. ಅವರಿಂದಾಗಿ ನಾನು ಇಂದು ಇಷ್ಟು ದೂರ ಸಾಗಿ ಬಂದಿದ್ದೇನೆ ಎನ್ನುತ್ತಾರೆ ನೈನಾ ಗಂಗೂಲಿ.