
ಚೆನ್ನೈ: ತಮಿಳು ಸಿನಿಮಾ ನಿರ್ದೇಶಕ ಬಾಲ ಅವರ ಮುಂಬರುವ ಚಿತ್ರ 'ವಾನಂಗಾನ್'ನಿಂದ ನಟ ಸೂರ್ಯ ಹೊರಗುಳಿದಿದ್ದಾರೆ.
ಶುಕ್ರವಾರ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, 'ಕಥೆಯಲ್ಲಿ ಕೆಲವು ಬದಲಾವಣೆಗಳ ನಂತರ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಸೂರ್ಯ ಈ ಯೋಜನೆಯಿಂದ ಹೊರನಡೆದಿದ್ದಾರೆ' ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
'ನನ್ನ ಸಹೋದರ ಸೂರ್ಯ ಜೊತೆಗೂಡಿ 'ವಾನಂಗಾನ್' ಎಂಬ ಹೊಸ ಸಿನಿಮಾವನ್ನು ನಿರ್ದೇಶಿಸಲು ಬಯಸಿದ್ದೆ. ಆದರೆ, ಕಥೆಯಲ್ಲಿನ ಕೆಲವು ಬದಲಾವಣೆಗಳಿಂದಾಗಿ, ಈ ಕಥೆಯು ಸೂರ್ಯನಿಗೆ ಸರಿಹೊಂದುತ್ತದೆಯೇ ಎಂಬ ಅನುಮಾನ ಮೂಡಿದೆ. ನನ್ನ ಹಾಗೂ ಈ ಕಥೆಯ ಮೇಲೆ ಸೂರ್ಯ ಅವರಿಗೆ ಸಂಪೂರ್ಣ ನಂಬಿಕೆ ಇದೆ. ಇಷ್ಟು ಪ್ರೀತಿ, ಗೌರವ, ವಿಶ್ವಾಸ ಹೊಂದಿರುವ ನನ್ನ ಕಿರಿಯ ಸಹೋದರನಿಗೆ ಸಣ್ಣದೊಂದು ಮುಜುಗರವನ್ನೂ ಉಂಟು ಮಾಡದಿರುವುದು ಸಹೋದರನಾಗಿ ನನ್ನ ಕರ್ತವ್ಯ' ಎಂದು ಬಾಲಾ ಹೇಳಿದ್ದಾರೆ.
ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ 'ನಂಧ' (2001) ಮತ್ತು 'ಪಿತಾಮಗನ್' (2003) ಸಿನಿಮಾಗಳ ಬಳಿಕ ನಿರ್ದೇಶಕರು ಮತ್ತು ಸೂರ್ಯ ನಡುವಿನ ಮೂರನೇ ಸಿನಿಮಾ ಇದಾಗಿತ್ತು. ಆದರೆ, ಇದೀಗ ಕಾರಣಾಂತರಗಳಿಂದ ವಾನಂಗಾನ್ ಸಿನಿಮಾದಲ್ಲಿ ಸೂರ್ಯ ನಟಿಸುತ್ತಿಲ್ಲ.
ಸೂರ್ಯ 'ವಾನಂಗಾನ್' ಸಿನಿಮಾದಿಂದ ಹಿಂದೆ ಸರಿಯುವ ಕುರಿತು ಚರ್ಚಿಸಿದ ಬಳಿಕ ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಭವಿಷ್ಯದಲ್ಲಿ ಮತ್ತೊಂದು ಯೋಜನೆಗೆ ಖಂಡಿತವಾಗಿಯೂ ಒಟ್ಟಿಗೆ ಕೆಲಸ ಮಾಡುತ್ತೇವೆ' ಎಂದು ಬಾಲಾ ಹೇಳಿದರು.
ಇದರಿಂದ ಅವರು ತೀವ್ರ ದುಃಖಿತರಾಗಿದ್ದರೂ ಅವರ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರ ಇದಾಗಿದೆ. 'ನಂಧ'ದಲ್ಲಿ ನಾನು ನೋಡಿದ ಸೂರ್ಯ ಮತ್ತು 'ಪಿತಾಮಗನ್'ನಲ್ಲಿ ನೀವು ನೋಡಿದ ಸೂರ್ಯ ಮುಂದಿನ ಬಾರಿ ನಮ್ಮೊಂದಿಗೆ ಸೇರುವುದು ಖಚಿತ. ಈಗ ವಾನಂಗಾನ್ ಸಿನಿಮಾದ ಚಿತ್ರೀಕರಣ ಮುಂದುವರಿಯುತ್ತದೆ ಎಂದಿದ್ದಾರೆ.
Advertisement