ಗಾಳಿಪಟ 2 ಚಿತ್ರದ 'ದೇವ್ಲೆ ದೇವ್ಲೆ' ಹಾಡು ಹಿಟ್ ಲಿಸ್ಟ್ ಗೆ ಸೇರ್ಪಡೆ!

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರದ ಮೂರನೇ ಹಾಡು ಬಿಡುಗಡೆಯಾದ ಕೆಲವೇ ದಿನಗಳ ಅಂತರದಲ್ಲಿ ಹಿಟ್ ಲಿಸ್ಟ್ ಸೇರಿದೆ.
ದೇವ್ಲೆ ದೇವ್ಲೇ ಹಾಡು
ದೇವ್ಲೆ ದೇವ್ಲೇ ಹಾಡು

ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರದ ಮೂರನೇ ಹಾಡು ಬಿಡುಗಡೆಯಾದ ಕೆಲವೇ ದಿನಗಳ ಅಂತರದಲ್ಲಿ ಹಿಟ್ ಲಿಸ್ಟ್ ಸೇರಿದೆ.

ಹೌದು.. ಗಾಳಿಪಟ 2 ಚಿತ್ರದ ಮೂರನೇ ಹಾಡು 'ದೇವ್ಲೆ ದೇವ್ಲೆ' ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕೇಳುಗರ ಮೆಚ್ಚುಗೆಗೆ ಪಾತ್ರವಾಗಿ ಹಿಟ್ ಲಿಸ್ಟ್ ಸೇರಿದೆ. ದೇವ್ಲೆ ದೇವ್ಲೆ ನಿರ್ದೇಶಕ ಯೋಗರಾಜ್ ಭಟ್ ಬರೆದ ಚಮತ್ಕಾರಿ ಸಾಹಿತ್ಯವನ್ನು ಹೊಂದಿದ್ದು, ಈ ಹಾಡನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ಹಾಡಿನ ಯಶಸ್ಸಿನ ಕುರಿತ ಮಾಧ್ಯಮ ಸಂವಾದದಲ್ಲಿ ಖುಷಿ ಹಂಚಿಕೊಂಡ ನಿರ್ದೇಶಕ ಯೋಗರಾಜ್ ಭಟ್, ಲಾಕ್‌ಡೌನ್ ಸಮಯದಲ್ಲಿ ದೇವ್ಲೆ ದೇವ್ಲೆಯನ್ನು ಚಿತ್ರೀಕರಿಸಲಾಗಿತ್ತು. ಇಡೀ ಸಿಬ್ಬಂದಿ ಕಝಾಕಿಸ್ತಾನ್‌ಗೆ ಪ್ರಯಾಣಿಸಿ ಹಿಮಭರಿತ ಹಿನ್ನೆಲೆ ಮತ್ತು ತಂಪಾದ ವಾತಾವರಣದಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದೇವೆ. ಹಾಡನ್ನು ಯಶಸ್ವಿಯಾಗಿ ಚಿತ್ರೀಕರಿಸಿದ ಕೀರ್ತಿ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಸಲ್ಲಬೇಕು ಎಂದರು.

ಗಾಳಿಪಟ 2 ನಾಯಕ ಗಣೇಶ್ ಅವರು ಮಾತನಾಡಿ, ತನಗೆ ಆರಂಭದಲ್ಲಿ ದೇವ್ಲೆ ದೇವ್ಲೆ ಬಗ್ಗೆ ಭಯವಿತ್ತು, ಆದರೆ ಈಗ ಅದು ರಿಪೀಟ್ ಮೋಡ್‌ನಲ್ಲಿದೆ. ವಿಜಯಪ್ರಕಾಶ್ ಅವರ ಧ್ವನಿ, ಅರ್ಜುನ್ ಜನ್ಯ ಅವರ ಸಂಗೀತ, ಸಂತೋಷ್ ರೈ ಪಾತಾಜೆ ಅವರ ಕ್ಯಾಮೆರಾ ವರ್ಕ್ ಮತ್ತು ಡ್ಯಾನ್ಸ್ ಮಾಸ್ಟರ್ ಧನು ಅವರ ನೃತ್ಯ ಸಂಯೋಜನೆಗಾಗಿ ನಾನು ದೇವ್ಲೆ ದೇವ್ಲೆಯ ಅಭಿಮಾನಿಯಾಗಿದ್ದೇನೆ ಮತ್ತು ಅವರು ಈ ಪೆಪ್ಪಿ ಟ್ರ್ಯಾಕ್ ಅನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಖುಷಿ ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಗಾಯಕ ವಿಜಯ್ ಪ್ರಕಾಶ್, ಯೋಗರಾಜ್ ಭಟ್ ಮತ್ತು ಗಣೇಶ್ ಜೊತೆಗಿನ ತಮ್ಮ ಪ್ರಯಾಣ ಗಾಳಿಪಟದಲ್ಲಿ ‘ಕವಿತೆ ಕವಿತೆ...’ ಮೂಲಕ ಆರಂಭಗೊಂಡಿದ್ದು, ಅದರ ಮುಂದುವರಿದ ಭಾಗಕ್ಕೂ ಕೈ ಜೋಡಿಸಿರುವುದು ಸಂತಸ ತಂದಿದೆ. ಯೋಗರಾಜ್ ಭಟ್ ಅವರಿಗಾಗಿ ನನ್ನ ಹಾಡುಗಳು ಯಾವಾಗಲೂ ಚಾರ್ಟ್‌ಬಸ್ಟರ್‌ಗಳಾಗಿರುತ್ತವೆ. ಇದು ಕೂಡ ಅದೇ ಪಟ್ಟಿಗೆ ಸೇರುತ್ತದೆ ಎಂದು ಭಾವಿಸುತ್ತೇನೆ ಎಂದರು.

ಲ ಕಾರದಲ್ಲಿ ಈ ಹಾಡನ್ನು ಹಾಡುವುದು ಕಷ್ಟ ಅಂದುಕೊಂಡೆ. ಬಳಿಕ ಅಭ್ಯಾಸ ಮಾಡಿದೆ. ಅರ್ಧ ಗಂಟೆಯಲ್ಲಿ "ದೇವ್ಲೆ ದೇವ್ಲೆ" ಹಾಡು ಹಾಡಿದೆ. ಈ ಹಾಡು ಮಾಡಿದಾಗ ಲ ಕಾರ ಇರಲಿಲ್ಲ. ಮೊದಲು ರ ಕಾರ ಇತ್ತು. ರ ಕಾರದ ಹಾಡು ಅಷ್ಟು ಮಜಾ ಇಲ್ಲ ಅಂದೆ. ಆಗ ಯೋಗರಾಜ್ ಸರ್, ರ ಕಾರಗಳನ್ನು ತೆಗೆದು ಲ ಕಾರ ಮಾಡು ಅಂದರು. ಹಾಗೆ ಮಾಡಿದಾಗ ಈ ಹಾಡು ತುಂಬಾ ಹಿಡಿಸಿತು ಎಂದು ವಿಜಯ್ ಪ್ರಕಾಶ್ ಹೇಳಿದರು.

ಇನ್ನು ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ, ಈ ಹಾಡಿನ‌ ಚಿತ್ರೀಕರಣ ನೋಡಲು ಕಜಾಕಿಸ್ತಾನಕ್ಕೆ ಹೋಗಿದ್ದೆ. ಅದೇ ಮೊದಲ ಬಾರಿಗೆ ನಾನು ಅಂತಾರಾಷ್ಟ್ರೀಯ ವಿಮಾನ ಹತ್ತಿದ್ದು, ಅಂತಹ ಚಳಿಯಲ್ಲಿ ಕೆಲಸ ಮಾಡಿದ್ದ ಚಿತ್ರ ತಂಡಕ್ಕೆ ಧನ್ಯವಾದ ಎಂದು ಹೇಳಿದರು.

ಗಾಳಿಪಟ 2 ಆಗಸ್ಟ್ 12 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದ್ದು, ಸೂರಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಲಾಗಿರುವ ಈ ಚಿತ್ರದಲ್ಲಿ ಅನಂತ್ ನಾಗ್, ದಿಗಂತ್, ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್ ಮತ್ತು ವೈಭವಿ ಶಾಂಡಿಲ್ಯ, ಸುಧಾ ಬೆಳವಾಡಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com