ರವಿಚಂದ್ರನ್ ಪುತ್ರನಿಗೆ ನಿರ್ದೇಶನ ಮಾಡುವುದು ಹೆಮ್ಮೆಯ ವಿಷಯ: ತ್ರಿವಿಕ್ರಮ ಡೈರೆಕ್ಟರ್ ಸಹನಾ ಮೂರ್ತಿ
ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ 'ತ್ರಿವಿಕ್ರಮ' ಜೂನ್ 24ರಂದು ಬಿಡುಗಡೆಯಾಗಲಿದೆ. ಮೊಟ್ಟ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ವಿಕ್ರಮ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಕ್ರಮ್ ಅವರಿಗೆ ಸಿನಿಮಾ ನಿರ್ದೇಶನ ಮಾಡುವುದು ಬಹು ದೊಡ್ಡ ಜವಾಬ್ದಾರಿಯಾಗಿತ್ತು. ರವಿಚಂದ್ರನ್ ಅವರಂತ ಪ್ರಸಿದ್ದ ನಟನ ಮಗನಿಗೆ ನಿರ್ದೇಶನ ಮಾಡುವುದು ಹೆಮ್ಮೆಯ ವಿಷಯ ಎಂದು ಸಹನಾ ಮೂರ್ತಿ ವಿವರಿಸಿದ್ದಾರೆ. ತಾನೊಬ್ಬ ನಟನ ಮಗ ಎಂಬ ಗರ್ವ ವಿಕ್ರಮ್ ಗಿಲ್ಲ, ಅವರು ಪ್ರಾಮಾಣಿಕವಾಗಿ ಸೆಟ್ ಗೆ ಬಂದು ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಜೂನ್ 24 ರಂದು ಸಿನಿಮಾ ರಿಲೀಸ್ ಆಗಲಿದ್ದು, ಅದಕ್ಕೂ ಮುನ್ನ ಪ್ರಿ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿದೆ, ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಮೂರ್ತಿ ಹೇಳಿದ್ದಾರೆ.
ಈ ಹಿಂದೆ ರೋಸ್ ಮತ್ತು ಮಾಸ್ ಲೀಡರ್ ನಿರ್ದೇಶನ ಮಾಡಿದ್ದ ಸಹನಾ ಮೂರ್ತಿ, ತ್ರಿವಿಕ್ರಮ ಮಾಸ್ ಮತ್ತು ಕ್ಲಾಸ್ ಅಂಶಗಳ ಮಿಶ್ರಣವಿರುವ ರೋಮ್ಯಾಂಟಿಕ್ ಡ್ರಾಮಾ ಎಂದಿದ್ದಾರೆ.
ಟಫ್ ಹೀರೋ ಮತ್ತು ಮುಗ್ಧ ಹುಡುಗಿಯ ಕಥೆ. ಈ ಎರಡು ವ್ಯತಿರಿಕ್ತ ಪಾತ್ರಗಳು ಹೇಗೆ ಪ್ರೀತಿಯಲ್ಲಿ ಬೀಳುತ್ತವೆ, ಮತ್ತು ಅವರು ತಮ್ಮ ಕುಟುಂಬದ ಒಪ್ಪಿಗೆಯನ್ನು ಹೇಗೆ ಪಡೆಯುತ್ತಾರೆ ಎಂಬುದು ತ್ರಿವಿಕ್ರಮನ ಪ್ರಯಾಣ. ನಾನು ಕಥೆಯನ್ನು ಅಪ್ಪು ಹಾಗೂ ಶಿವರಾಜಕುಮಾರ್ ಅವರಿಗೆ ಹೇಳಿದ್ದೆ, ರವಿ ಸರ್ ತ್ರಿವಿಕ್ರಮ ಸಿನಿಮಾವನ್ನು ಥಿಯೇಟರ್ ನಲ್ಲಿ ಮೊದಲ ದಿನ ಫಸ್ಟ್ ಶೋ ನೋಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಿಕ್ರಮ್ ಬಗ್ಗೆ ಮಾತನಾಡಿದ ಸಹನಾ ಮೂರ್ತಿ, ಸಿನಿಮಾದ ಕೆಲವು ಸನ್ನಿವೇಶಗಳಲ್ಲಿ ಪ್ರೇಕ್ಷಕರಿಗೆ ರವಿಚಂದ್ರನ್ ಅವರನ್ನು ನೋಡಿದಂತೆಯೇ ಅನಿಸುತ್ತದೆ. ವಿಕ್ರಮ್ ಉತ್ತಮ ಡ್ಯಾನ್ಸರ್, ಹಾಸ್ಯ ಪ್ರಜ್ಞೆ ಹೊಂದಿರುವ ಅವರು ಭಾವನೆಗಳ ಮೇಲೆ ಉತ್ತಮವಾಗಿ ಹಿಡಿತ ಹೊಂದಿದ್ದಾರೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳಲ್ಲಿ ನಾಯಕಿಗೆ ಇರುವ ಪ್ರಾಮುಖ್ಯತೆ ಹಾಗೂ ಗ್ಲಾಮರಸ್ ಅಂಶಗಳನ್ನು ನಾನು ಈ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದೇನೆ. ವಿಕ್ರಮ್ ಗೆ ನಾಯಕಿಯಾಗ ಆಕಾಂಕ್ಷಾ ಶರ್ಮಾ ಉತ್ತಮವಾಗಿ ನಟಿಸಿದ್ದಾರೆ. ಗೌರಿ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಸೋಮಣ್ಣ ನಿರ್ಮಿಸಿರುವ ತ್ರಿವಿಕ್ರಮ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ