'ಮಾಡಬೇಕೆಂದೇ ಮಾಡುತ್ತಿರುವ ವಿವಾದವಿದು’: ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
ಬಟ್ಟೆಯ ಬಣ್ಣದ ಕಾರಣಕ್ಕೆ ವ್ಯಕ್ತಿಸುತ್ತಿರುವ ವಿರೋಧವು ಬಹಳ ಕ್ಷುಲ್ಲಕವಾಗಿದೆ. ಬುದ್ಧ ಮತ್ತು ಬಸವನವರ ಬಣ್ಣವಾದ ಕೇಸರಿಯನ್ನು ಹಿಂದುತ್ವವು ತನ್ನದಾಗಿಸಿಕೊಳ್ಳುತ್ತಿದೆ.
Published: 16th December 2022 10:42 AM | Last Updated: 16th December 2022 10:42 AM | A+A A-

ಚೇತನ್ ಕುಮಾರ್
ಬೆಂಗಳೂರು: ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ನಾಲ್ಕೈದು ದಿನಗಳಿಂದ ಸಾಕಷ್ಟು ಚರ್ಚೆ ಆಗುತ್ತಿದೆ. ನಟಿ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ಹಿಂದೂ ಕಾರ್ಯಕರ್ತರು ದೀಪಿಕಾ ಮೇಲೆ ಮುಗಿಬಿದ್ದಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟ ಚೇತನ್, ‘ಪಠಾಣ್ ಚಿತ್ರದ ಹಾಡು ಈಗ ಅದರ ಕೇಸರಿ ಬಿಕಿನಿ ಮತ್ತು ಹಸಿರು ಶರ್ಟ್ ಕಾರಣದಿಂದ ರಾಜಕೀಯಗೊಳ್ಳುತ್ತಿದೆ. ಬಟ್ಟೆಯ ಬಣ್ಣದ ಕಾರಣಕ್ಕೆ ವ್ಯಕ್ತಿಸುತ್ತಿರುವ ವಿರೋಧವು ಬಹಳ ಕ್ಷುಲ್ಲಕವಾಗಿದೆ. ಬುದ್ಧ ಮತ್ತು ಬಸವನವರ ಬಣ್ಣವಾದ ಕೇಸರಿಯನ್ನು ಹಿಂದುತ್ವವು ತನ್ನದಾಗಿಸಿಕೊಳ್ಳುತ್ತಿದೆ. ಪ್ರಕೃತಿ ಮತ್ತು ರೈತರ ಸಂಕೇತವಾದ ಹಸಿರು ಬಣ್ಣವು ಇಸ್ಲಾಮೀಕರಣಗೊಳ್ಳುತ್ತಿದೆ. ಮಾಡಬೇಕೆಂದೇ ಮಾಡುತ್ತಿರುವ ವಿವಾದವಿದು’ ಎಂದು ಅವರು ಬರೆದುಕೊಂಡಿದ್ದಾರೆ.
ಪಠಾಣ್ ಸಿನಿಮಾದ ಬೇಷರಂ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿದೆ. ಇದು ಬೇಕು ಅಂತಾನೇ ಮಾಡಿದ ಹುನ್ನಾರ ಎಂದು ಹಿಂದೂಪರ ಸಂಘಟನೆಗಳು ಆರೋಪಿಸುತ್ತಿವೆ.