ಕೇವಲ 10 ಸಿನಿಮಾ ಮಾಡಿದ್ದಕ್ಕೆ ಕಂಗನಾಗೆ ಪದ್ಮಶ್ರೀ, ದಕ್ಷಿಣ ಭಾರತದವರಿಗೆ ಯಾಕಿಲ್ಲ; ಚರ್ಚೆ ಹುಟ್ಟುಹಾಕಿದ ನಟಿ ಜಯಸುಧಾ ಹೇಳಿಕೆ

ದಕ್ಷಿಣ ಮತ್ತು ಬಾಲಿವುಡ್​ ನಡುವೆ ಯಾರು ಬೆಸ್ಟು ಎಂಬ ಚರ್ಚೆ ಕೆಲವು ದಿನಗಳಿಂದ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ, ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಟಿ ಜಯಸುಧಾ, ಪ್ರಶಸ್ತಿ ವಿಚಾರದಲ್ಲಿ ದಕ್ಷಿಣದವರನ್ನು ಕಡೆಗಣಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಕಂಗನಾ ಮತ್ತು ಜಯಸುಧಾ
ಕಂಗನಾ ಮತ್ತು ಜಯಸುಧಾ

ಹೈದರಾಬಾದ್​: ದಕ್ಷಿಣ ಮತ್ತು ಬಾಲಿವುಡ್​ ನಡುವೆ ಯಾರು ಬೆಸ್ಟು ಎಂಬ ಚರ್ಚೆ ಕೆಲವು ದಿನಗಳಿಂದ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ, ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಟಿ ಜಯಸುಧಾ, ಪ್ರಶಸ್ತಿ ವಿಚಾರದಲ್ಲಿ ದಕ್ಷಿಣದವರನ್ನು ಕಡೆಗಣಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ನಟಿ ಕಂಗನಾ ರಣಾವತ್‌ಗೆ ಪದ್ಮಶ್ರೀಗೆ ಸಿಕ್ಕಿದೆ. ಅವರು ಅದ್ಭುತ ನಟಿ. ಅದರಲ್ಲೂ 10 ಸಿನಿಮಾ ಮಾಡುವುದರೊಳಗೆ ಅವರು ಪದ್ಮಶ್ರೀ ಪಡೆದುಕೊಂಡರು. ಆದರೆ ಇಲ್ಲಿ ನಾವು ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದೇವೆ. ಇನ್ನೂ ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟಿಲ್ಲ ಎಂದು ಬೇಸರ ಹೊರಹಾಕಿದ್ದಾರೆ ಜಯಸುಧಾ.

ಹಿರಿಯ ನಟಿ/ನಿರ್ದೇಶಕ ವಿಜಯ ನಿರ್ಮಲಾ ಅವರನ್ನು ಹೆಸರನ್ನು ಉಲ್ಲೇಖಿಸಿರುವ ಜಯಸುಧಾ, 'ಗಿನ್ನಿಸ್ ದಾಖಲೆ ಬರೆದಿರುವ ನಿರ್ದೇಶಕಿ ವಿಜಯ ನಿರ್ಮಲಾ ಅವರಿಗೂ ಅಂತಹ ಮೆಚ್ಚುಗೆ ಸಿಕ್ಕಿಲ್ಲ. ಕೆಲವೊಮ್ಮೆ, ದಕ್ಷಿಣದವರು ಸರ್ಕಾರದಿಂದ ಮೆಚ್ಚುಗೆ ಪಡೆಯುತ್ತಿಲ್ಲ ಎಂದು ನನಗೆ ಬೇಸರವಾಗುತ್ತದೆ' ಎಂದಿದ್ದಾರೆ.

ಆಹಾ ಓಟಿಗಾಗಿ ನಂದಮೂರಿ ಬಾಲಕೃಷ್ಣ ನಡೆಸಿಕೊಡುತ್ತಿರುವ ‘ಅನ್​ಸ್ಟಾಪಬಲ್​’ ಎಂಬ ಕಾರ್ಯಕ್ರಮದಲ್ಲಿ ಹಿರಿಯ ನಟಿಯರಾದ ಜಯಸುಧಾ ಮತ್ತು ಜಯಪ್ರದಾ ಇಬ್ಬರೂ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಯಸುಧಾ, ಪ್ರಶಸ್ತಿ ವಿಚಾರದಲ್ಲಿ ಆಗುತ್ತಿರು ತಾರತಮ್ಯಗಳ ಕುರಿತು ಮಾತನಾಡುವುದರ ಜತೆಗೆ, ದಕ್ಷಿಣದವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಬೇಸರ ಹೊರಹಾಕಿದ್ದಾರೆ.

‘ಕಂಗನಾ ರಣಾವತ್​ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ನನಗೆ ಆ ಬಗ್ಗೆ ಬೇಸರವಿಲ್ಲ. ಅವರೊಬ್ಬ ಅದ್ಭುತ ನಟಿ. ಆದರೆ, ಅವರು 10 ಸಿನಿಮಾ ಮುಗಿಸೋಕಿಂತ ಮುನ್ನ ಅವರಿಗೆ ಅಂಥದ್ದೊಂದು ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿತು. ನಾನು ನೂರಾರು ಚಿತ್ರಗಳಲ್ಲಿ ನಟಿಸಿದ್ದೇವೆ. ಆದರೆ, ಯಾವ ಸರ್ಕಾರವೂ ಗುರುತಿಸಿಲ್ಲ’ ಎಂದಿದ್ದಾರೆ.

ಇದಕ್ಕೆ ದನಿಗೂಡಿಸಿದ ಮತ್ತೋರ್ವ ಹಿರಿಯ ನಟಿ ಜಯಪ್ರದಾ, 'ನಾವು ಅದನ್ನು ಗೌರವಯುತವಾಗಿ ಪಡೆಯಬೇಕು, ಅದನ್ನು ಕೇಳಬಾರದು..' ಎಂದು ಹೇಳಿರುವ ಅವರು, ಹಿರಿಯ ನಟ ಎನ್‌ಟಿಆರ್ ಅವರಿಗೆ ಭಾರತ ರತ್ನ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸದ್ಯ ಜಯಸುಧಾರ ಹೇಳಿರುವ ಕಾಮೆಂಟ್ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಅಂದಹಾಗೆ, 2006ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಕಂಗನಾ ಈವರೆಗೂ ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅವರ ಅತ್ಯುತ್ತಮ ನಟನೆಗಾಗಿ ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com