
777 ಚಾರ್ಲಿ ಸಿನಿಮಾ ಸ್ಟಿಲ್
ನಟ ರಕ್ಷಿತ್ ಶೆಟ್ಟಿ ಅಭಿನಯದ, ಕಿರಣ್‌ರಾಜ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘777 ಚಾರ್ಲಿ’ ಒಟಿಟಿ ವೇದಿಕೆಗೆ ಬರಲು ದಿನಾಂಕ ನಿಗದಿಯಾಗಿದೆ. ಕಳೆದ ಜೂನ್ 10ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಈ ಸಿನಿಮಾ ದೇಶದಾದ್ಯಂತ 450ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ 25 ದಿನ ಪೂರೈಸಿತ್ತು.
ಜುಲೈ 29ರಿಂದ ವೂಟ್ ಸೆಲೆಕ್ಟ್‌ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಬೀದಿ ನಾಯಿಗಳ ರಕ್ಷಣೆ, ಪೋಷಣೆ ಕುರಿತ ಸಂದೇಶವಿರುವ ಈ ಚಿತ್ರದಲ್ಲಿ ‘ಧರ್ಮ’ನ ಪಾತ್ರದಲ್ಲಿ ರಕ್ಷಿತ್ ನಟಿಸಿದ್ದರು. ಧರ್ಮ–ಚಾರ್ಲಿಯ ಭಾವನಾತ್ಮಕ ಪಯಣ ಪ್ರೇಕ್ಷಕರನ್ನು ಸೆಳೆದಿತ್ತು. ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲೇ ಕಿರಣ್‌ರಾಜ್ ಖ್ಯಾತಿ ಪಡೆದಿದ್ದರು.
25ನೇ ದಿನವೇ ರಕ್ಷಿತ್ ಶೆಟ್ಟಿ ಭರವಸೆಯ ಮಾತುಗಳನ್ನು ಆಡಿದ್ದರು. ಈ ಸಿನಿಮಾ 50 ದಿನಗಳನ್ನು ಪೂರೈಸುತ್ತೆ ಎಂಬ ಭರವಸೆಯಿದೆ. ಅಂದು ಸಿನಿಮಾ ಯಶಸ್ಸನ್ನು ಸಂಭ್ರಮಿಸುತ್ತೇವೆ ಎಂದು ಹೇಳಿದ್ದರು. ಅಂತೆಯೇ ಜುಲೈ 29ರಂದು '777 ಚಾರ್ಲಿ' ಸಿನಿಮಾ 50 ದಿನಗಳನ್ನು ಪೂರೈಸಲಿದೆ. ಹೀಗಾಗಿ ಇದೇ ದಿನ ವೂಟ್ ಸೆಲೆಕ್ಟ್‌ನಲ್ಲಿ '777 ಚಾರ್ಲಿ' ಬಿಡುಗಡೆಯಾಗುತ್ತೆ ಎಂದು ಹೇಳಲಾಗುತ್ತಿದ್ದು, ನನಗೆ ಹೃದಯ ತುಂಬಿ ಬಂದಿದೆ ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಾದ್ಯಂತ 450 ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿ 100 ಕೋಟಿ ಕ್ಲಬ್ ಸೇರಿದ 777 ಚಾರ್ಲಿ!
777 ಚಾರ್ಲಿ ಚಿತ್ರೀಕರಣದ ಸಮಯದಲ್ಲಿ ಚಿತ್ರಿಸಿದ ಪ್ರತಿಯೊಂದು ಭಾವನೆಗಳು ಸಹಜ ಮತ್ತು ಹೃದಯಾಂತರಾಳದಿಂದ ಬಂದಂತವು, ಅದನ್ನು, ನಾನು ನನ್ನ ಮುಂದಿನ ಸಿನಿಮಾಗಳಲ್ಲಿಯೂ ಅಳವಡಿಸಿಕೊಂಡು ಹೋಗುತ್ತೇನೆ, ಚಾರ್ಲಿ ಸಿನಿಮಾ ವೂಟ್ ನಲ್ಲಿ ರಿಲೀಸ್ ಆಗುತ್ತಿರುವುದು ನನಗೆ ಅಪಾರ ಸಂತಸ ತಂದಿದೆ, ಈ ಚಿತ್ರ ನನಗೆ ಮರೆಯಲಾರದಂತ ಅನುಭವ ಕೊಟ್ಟಿದೆ ಎಂದು ನಾಯಕಿ ಸಂಗೀತ ಶೃಂಗೇರಿ ಹೇಳಿದ್ದಾರೆ.