ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ

'ಕಾಂತಾರ' ಬಗ್ಗೆ ಅಪಸ್ವರ ಎತ್ತುವವರಿಗೆ ನೋ ಕಮೆಂಟ್ಸ್, ಸಂಸ್ಕೃತಿ ಬಗ್ಗೆ ಮಾತನಾಡುವಷ್ಟು ಅರ್ಹತೆ ನನಗಿಲ್ಲ: ರಿಷಬ್ ಶೆಟ್ಟಿ

ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ಹೇಳಿರುವುದು ನಿಜವಲ್ಲ. ಕಾಂತಾರ ಚಿತ್ರವನ್ನು ಉತ್ತಮವಾಗಿ ಮಾಡಿದ್ದಾರೆ, ಆದರೆ ಅದರಲ್ಲಿ ಕೆಲವು ವಾಸ್ತವಗಳನ್ನು ಮರೆಮಾಚಿದ್ದಾರೆ ಎಂದು ನಟ ಚೇತನ್ ಅಹಿಂಸ ಎತ್ತಿರುವ ಆಕ್ಷೇಪಕ್ಕೆ ಕಾಂತಾರ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
Published on

ಹೈದರಾಬಾದ್: ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ಹೇಳಿರುವುದು ನಿಜವಲ್ಲ. ಕಾಂತಾರ ಚಿತ್ರವನ್ನು ಉತ್ತಮವಾಗಿ ಮಾಡಿದ್ದಾರೆ, ಆದರೆ ಅದರಲ್ಲಿ ಕೆಲವು ವಾಸ್ತವಗಳನ್ನು ಮರೆಮಾಚಿದ್ದಾರೆ, ಭೂತ ಕೋಲ ಕಟ್ಟುವವರ ಬಗ್ಗೆ ಸರಿಯಾಗಿ ತೋರಿಸಿಲ್ಲ ಎಂದು ನಟ ಚೇತನ್ ಅಹಿಂಸ ಎತ್ತಿರುವ ಆಕ್ಷೇಪಕ್ಕೆ ಕಾಂತಾರ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ನಟ ಚೇತನ್ ಅವರ ಹೇಳಿಕೆಗೆ ನೋ ಕಮೆಂಟ್ಸ್, ಅವರ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಲಿ, ಅದಕ್ಕೆ ನಾನು ಪ್ರತಿಕ್ರಿಯಿಸಬಾರದು, ಕರಾವಳಿ ಭಾಗದ ದಕ್ಷಿಣ ಕನ್ನಡ ಮೂಲದ ತುಳುನಾಡಿನ ಸಂಸ್ಕೃತಿ, ಸಂಪ್ರದಾಯ, ದೈವಾರಾಧನೆ ಮಾಡುವವರು, ದೈವ, ಭೂತ ಕೋಲ ಕಟ್ಟುವವರಿಗೆ, ಅದನ್ನು ಆರಾಧನೆ ಮಾಡುವ ಜನರ ನಂಬಿಕೆಗೆ ಧಕ್ಕೆ ಬರಬಾರದು, ಯಾವುದೇ ಚ್ಯುತಿಯುಂಟಾಗಬಾರದು ಎಂದು ತುಂಬಾ ಜಾಗ್ರತೆ ವಹಿಸಿ ಕಥೆ ತಯಾರಿಸಿ ಚಿತ್ರ ಮಾಡಿದ್ದೇನೆ. ಪ್ರತಿಯೊಂದು ದೃಶ್ಯ ತೆಗೆಯುವಾಗಲೂ ಚರ್ಚಿಸಿ ತೆಗೆದಿದ್ದೇನೆ, ಅಂದರೆ ತಪ್ಪು ಆಗಬಾರದು ಎಂಬುದು ನನ್ನ ಉದ್ದೇಶವಾಗಿತ್ತು ಎಂದರು.

ನಾನು ಬಾಲ್ಯದಿಂದಲೇ ದೈವ, ಭೂತ ಕೋಲ ನೋಡಿಕೊಂಡು ಬೆಳೆದವನು. ಇದರ ಬಗ್ಗೆ ಜನತೆಗೆ ಸಾಕಷ್ಟು ಮಾಹಿತಿ ಸಿಗುತ್ತದೆ. ಕಾಂತಾರ ಬಗ್ಗೆ ಅಪಸ್ವರ ಎತ್ತುವವರಿಗೆ ನಾನು ಪ್ರತಿಕ್ರಿಯೆ ನೀಡುವುದು, ಉತ್ತರ ನೀಡುವ ಅಗತ್ಯವಿಲ್ಲ. ನೋ ಕಮೆಂಟ್ಸ್, ಚೇತನ್ ಅಹಿಂಸ ಅವರಿಗೆ ಆರಾಮಾಗಿರಿ, ಅದಕ್ಕೆ ಸಂಬಂಧಪಟ್ಟವರು ಮಾತನಾಡುತ್ತಾರೆ ಎಂದು ಹೇಳಲು ಬಯಸುತ್ತೇನೆ ಎಂದರು.

ನಾವು ಮಾಡಿರುವ ಚಿತ್ರವನ್ನು ತಪ್ಪು ಸರಿ ಹೇಳುವ ಅಧಿಕಾರ ಜನರಿಗೆ ಇರುತ್ತದೆ. ಕಾಂತಾರ ಚಿತ್ರ ಮಾಡಿ ಈಗ ಜನತೆಯ ಮುಂದೆ ಹೋಗಿದೆ, ಈಗ ಅದು ನನ್ನದಲ್ಲ. ಚಿತ್ರ ತೆಗೆಯುವಾಗ ನನ್ನ ಬೆವರು, ರಕ್ತ ಸುರಿಸಿ ಸಾಕಷ್ಟು ಸಂಶೋಧನೆ ಮಾಡಿ ತೆಗೆದಿದ್ದೇನೆ. ಈಗ ಜನತೆಯ ಕೈಯಲ್ಲಿದೆ, ಅವರು ಎಲ್ಲಿಗೆ ತೆಗೆದುಕೊಂಡು ಹೋಗುತ್ತಾರೋ ಅಲ್ಲಿಗೆ ಹೋಗುತ್ತದೆ ಎಂದರು.

ಸಂಸ್ಕೃತಿ ಬಗ್ಗೆ ಮಾತನಾಡುವಷ್ಟು ಅರ್ಹತೆ ನನಗಿಲ್ಲ. ಕೇಳುವವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ದೈವ, ಭೂತಾರಾಧನೆ ವ್ಯವಸ್ಥೆಯೊಳಗೆ ಇರುವವರು, ದೈವಾರಾಧನೆ ಮಾಡುತ್ತಿರುವವರು, ಪಾರಂಪರಿಕವಾಗಿ ಆಚರಿಸಿಕೊಂಡು ಹೋಗುತ್ತಿರುವವರು ಮಾತನಾಡಬೇಕೆ ಹೊರತು ನಾನಲ್ಲ. ದೈವ, ಭೂತಕೋಲಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಆ ವರ್ಗದ ಜನರೇ ಇದ್ದಾರೆ. ಹಾಗಾಗಿ ನಾವು ಮಾತನಾಡಬಾರದು, ಅವರೇ ಮಾತನಾಡಿದರೆ ಚೆಂದ ಎಂದು ರಿಷಬ್ ಶೆಟ್ಟಿ ಮಾತು ಮುಗಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com