ಸಿಎಂ ಸಿದ್ದರಾಮಯ್ಯ ಬಯೋಪಿಕ್ 'ಲೀಡರ್ ರಾಮಯ್ಯ': ವಿಜಯ್ ಸೇತುಪತಿ ಡೇಟ್ಸ್ ಗಾಗಿ ಕಾಯುತ್ತಿದೆ ಚಿತ್ರತಂಡ!
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರದ ಕಥೆಯನ್ನು ಕಳೆದ ಏಳು ತಿಂಗಳಿನಿಂದ ಸಿದ್ದಪಡಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್‌ಗೆ 'ಲೀಡರ್ ರಾಮಯ್ಯ' ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ತರಲು ಪ್ಲ್ಯಾನ್ ಕೂಡ ಮಾಡಿಕೊಳ್ಳಲಾಗಿದೆ.
ಲೀಡರ್ ರಾಮಯ್ಯ ಟೈಟಲ್ ಜೊತೆಗೆ ಎ ಕಿಂಗ್ ರೈಸ್ಡ್ ಬೈ ದಿ ಪೀಪಲ್ ಎಂಬ ಟ್ಯಾಗ್ ಲೈನ್ ಒಳಗೊಂಡಿದೆ. ರಾಜ್ಯದ 24 ನೇ ಮುಖ್ಯಮಂತ್ರಿಯ ಜೀವನದ ಸುತ್ತ ಈ ಕತೆ ಸುತ್ತುತ್ತದೆ. ಸತ್ಯರತ್ನಂ ನಿರ್ದೇಶನದ ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂಬುದು ಲೇಟೆಸ್ಟ್ ಡೆವಲಪ್ ಮೆಂಟ್.
ಆಗಸ್ಟ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕರು ಸಿದ್ಧತೆಯಲ್ಲಿದ್ದಾರೆ. ತಮಿಳು ನಟ ವಿಜಯ್ ಸೇತುಪತಿಯನ್ನು ಕರೆತರಲು ಬಹಳ ಉತ್ಸುಕರಾಗಿರುವ ಚಿತ್ರದ ನಿರ್ಮಾಪಕರು ಅವರನ್ನು ಈಗಾಗಲೇ ಸಂಪರ್ಕಿಸಿದ್ದಾರೆ.
ತಂಡದ ಮಾಹಿತಿ ಪ್ರಕಾರ, ವಿಜಯ್ ಸೇತುಪತಿ ಈ ಚಿತ್ರದಲ್ಲಿ ನಟಿಸಲು ಹಸಿರು ನಿಶಾನೆ ತೋರಿಸಿದ್ದಾರೆ, ಸೇತು ಪತಿ ಅವರ ಡೇಟ್ಸ್ ಗಾಗಿ ಕಾಯಲು ಪ್ರೊಡಕ್ಷನ್ ಹೌಸ್ ಸಿದ್ಧವಾಗಿದೆ. ಸಿದ್ದರಾಮಯ್ಯನವರ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಲಿದ್ದು, ವಕೀಲರಾಗಿ ವೃತ್ತಿ ಪ್ರಯಾಣ ಆರಂಭಿಸಿದಾಗಿನಿಂದ ಕಥೆ ಪ್ರಾರಂಭವಾಗಲಿದೆ. ಈ ಬಯೋಪಿಕ್ಸ್ ನಲ್ಲಿ 20 ರಿಂದ 30 ನಿಮಿಷಗಳಲ್ಲಿ ಸಿಎಂ ಸಿದ್ದರಾಮಯ್ಯ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ಬಯೋಪಿಕ್ ನ ಮೊದಲು ಭಾಗ 1 ರಲ್ಲಿ ಸಿದ್ಧರಾಮಯ್ಯನ ಬೆಳವಣಿಗೆಯ ಬಾಲ್ಯದ ದಿನಗಳು ಮತ್ತು ಪ್ರೌಢಾವಸ್ಥೆಯ ಪ್ರಯಾಣ ತಿಳಿಸುತ್ತದೆ. ಸಿದ್ಧರಾಮಯ್ಯನ ಕಿರಿಯ ಆವೃತ್ತಿಯನ್ನು ನಿರ್ವಹಿಸುವ ಯುವ ನಟನ ಹುಡುಕಾಟದಲ್ಲಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುತ್ತಾರೆ.
ನಾಯಕಿಯರ ಫೈನಲ್ ಆದಾಗ ಉಳಿದ ಕಲಾವಿದರ ಘೋಷಣೆ ಮಾಡಲಾಗುತ್ತದೆ. ಪ್ರಾಜೆಕ್ಟ್ ನ ಭಾಗವಾಗಿ ಕನ್ನಡದಿಂದ ಕೆಲವು ಸೂಪರ್‌ಸ್ಟಾರ್‌ಗಳನ್ನು ಕರೆತರಲು ನಿರ್ದೇಶಕರು ಚಿಂತಿಸುತ್ತಿದ್ದು, ಈ ಸಂಬಂಧ ಈಗಾಗಲೇ ಹಲವು ನಟರ ಜೊತೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಲೀಡರ್ ರಾಮಯ್ಯ ಸಿನಿಮಾಗೆ ಶಶಾಂಕ್ ಶೇಷಗಿರಿ ಸಂಗೀತ ನೀಡಲಿದ್ದಾರೆ. ಸಿನಿಮಾದ ಮೊದಲ ಭಾಗದಲ್ಲಿ 3 ರಿಂದ 4 ಹಾಡುಗಳನ್ನು ಹೊರತರಲು ಗಾಯಕ-ಸಂಗೀತ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ಅವರು ಈಗಾಗಲೇ ಗಾಯಕ ಹರಿಚರಣ್ ಅವರಿಂದ ಒಂದು ಹಾಡನ್ನು ರೆಕಾರ್ಡ್ ಮಾಡಿಸಿದ್ದಾರೆ.
ಇದು ಶಶಾಂಕ್ ಅವರ ನಾಲ್ಕನೇ ಪ್ರಾಜೆಕ್ಟ್ ಆಗಿದ್ದು, ಅವರು ಈ ಹಿಂದೆ ಉಪ್ಪು ಹುಳಿ ಖಾರ, ರಾಂಧವ ಮತ್ತು ಗೌಳಿಯಲ್ಲಿ ಕೆಲಸ ಮಾಡಿದ್ದಾರೆ. ಹಯತ್ ಪೀರಾ ಮತ್ತು ಚನ್ನಪ್ಪ ಹಾಲಳ್ಳಿ ಜಂಟಿಯಾಗಿ ಸಿನಿಮಾ ನಿರ್ಮಿಸಿದ್ದಾರೆ. ಉದಯ್ ಲೀಲಾ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ.