ಚಂದ್ರಯಾನ-3 ಎಲ್ಲಿದೆ ಸಂಭ್ರಮ; ಮಣಿಪುರದ ಘನಘೋರ ದೃಶ್ಯಗಳು ನನ್ನ ಕಣ್ಮುಂದೆ ಬರುತ್ತದೆ: ನಟ ಕಿಶೋರ್

ಚಂದ್ರಯಾನ 3 ಬಗ್ಗೆ ಅಪಹಾಸ್ಯ ಮಾಡಿ ನಟ ಪ್ರಕಾಶ್ ರಾಜ್ ತೀವ್ರ ಟ್ರೋಲ್ ಗೆ ಒಳಗಾದ ಬೆನ್ನಲ್ಲೇ ಇದೀಗ ಮತ್ತೋರ್ವ ನಟ ಕಿಶೋರ್ ಚಂದ್ರಯಾನ 3 ಬಗ್ಗೆ ಮಾತನಾಡಿದ್ದಾರೆ. 
ಪ್ರಧಾನಿ ಮೋದಿ-ನಟ ಕಿಶೋರ್
ಪ್ರಧಾನಿ ಮೋದಿ-ನಟ ಕಿಶೋರ್

ಬೆಂಗಳೂರು: ಚಂದ್ರಯಾನ 3 ಬಗ್ಗೆ ಅಪಹಾಸ್ಯ ಮಾಡಿ ನಟ ಪ್ರಕಾಶ್ ರಾಜ್ ತೀವ್ರ ಟ್ರೋಲ್ ಗೆ ಒಳಗಾದ ಬೆನ್ನಲ್ಲೇ ಇದೀಗ ಮತ್ತೋರ್ವ ನಟ ಕಿಶೋರ್ ಚಂದ್ರಯಾನ 3 ಬಗ್ಗೆ ಮಾತನಾಡಿದ್ದಾರೆ. 

ಚಂದ್ರನ ದಕ್ಷಿಣ ಧುೃವದ ಮೇಲೆ ಪ್ರಪಂಚದಲ್ಲೇ ಮೊತ್ತ ಮೊದಲ ಬಾರಿಗೆ ಭಾರತದ ಉಪಗ್ರಹ ಅಡಿಯಿರಿಸಿದೆ. ಹೆಮ್ಮೆಯಿದೆ, ಎದೆ ಬೀಗಿದೆ ಆದರೆ ಸಂಭ್ರಮಿಸಲೇ ಎನ್ನುತ್ತಿರುವಂತೆಯೇ ನನ್ನ ಕಣ್ಣ ಮುಂದೆ. ನನ್ನ ದೇಶದ ಕುತಂತ್ರಿ ರಾಜಕಾರಿಣಿಗಳು ನನ್ನ ಮನೆಯ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಮಾಡುತ್ತಿರುವ ಚಿತ್ರ ಬಂದು ನಿಲ್ಲುತ್ತದೆ. 

ನನ್ನ ರೈತ ಸಹೋದರರ ಮೇಲೆ ಜೀಪು ಹರಿಸಿ ಕೊಲ್ಲುತ್ತಿರುವ ಚಿತ್ರ. ಹಿಂದೂ-ಮುಸ್ಲಿಂ ಮೂಲಭೂತವಾದಿಗಳಿಗೆ ಕುಮ್ಮಕ್ಕು ಕೊಟ್ಟು ದೇಶವನ್ನು ಒಡೆಯುತ್ತಿರುವ ಚಿತ್ರ. ನನ್ನ ಮುಸ್ಲಿಂ, ಕ್ರಿಶ್ಚಿಯನ್ ಸಹೋದರ ಸಹೋದರಿಯರ ಮನೆ, ಹೊಟ್ಟೆಪಾಡಿನ ಅಂಗಡಿಗಳನ್ನು ಧರ್ಮಾಂಧ ಬುಲ್ಡೊಜರುಗಳು ಪುಡಿ ಪುಡಿ ಮಾಡುತ್ತಿರುವ ಚಿತ್ರ. ರಾಜಕೀಯ ದಾಳಗಳಾಗಿ ಸಾಯುತ್ತಲೇ ಇರುವ ಕಾಶ್ಮೀರದ ಜನತೆಯ ಚಿತ್ರ. ಇಂದಿಗೂ ದಲಿತರ, ಆದಿವಾಸಿಗಳ ಮೇಲೆ ಎಸಗುತ್ತಿರುವ ಹೇಸಿಗೆ ದೌರ್ಜನ್ಯದ ಚಿತ್ರ, ದೇಶದ ಯೋಧರನ್ನು ರಾಜಕಾರಿಣಿಗಳೇ ತಯಾರು ಮಾಡಿದ ಸಾವಿನ ಕೂಪಕ್ಕೆ ತಳ್ಳುವ ಚಿತ್ರ. ಹೀಗೇ ನೂರಾರು... ಉಪಗ್ರಹಕ್ಕಿಂತ ಪರದೆಯ ಮೇಲೆ ಹೆಚ್ಚು ರಾರಾಜಿಸಿ ಮೆರೆದ ಪ್ರಧಾನಿಯಂತೆ ನಾನೂ ಕೂಡ ಸ್ವಾರ್ಥಿಯೂ, ಅಸೂಕ್ಷ್ಮಮತಿಯೂ, ಸಂವೇದನಾಹೀನನೂ ಆಗಬಾರದಿತ್ತೆ. ಸಂಬಳವೂ ಇಲ್ಲದೆ ದುಡಿದ ನನ್ನ ದೇಶದ ವಿಜ್ಞಾನಿಗಳ ಬೆವರ ಫಲವನ್ನು ಸಂಭ್ರಮಿಸಲು…?? ಎಂದು ಕಿಶೋರ್ ಪೋಸ್ಟ್ ಮಾಡಿದ್ದಾರೆ.

ಕಿಶೋರ್‌ ಪೋಸ್ಟ್‌ ಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದು ಹಲವಾರು ಮಂದಿ ಕಿಶೋರ್‌ ಪೋಸ್ಟ್‌ ಬಗ್ಗೆ ಕಟುವಾಗಿ ಟೀಕಿಸುತ್ತಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಮೂರನೇ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ನಿನ್ನೆ ಸಂಜೆ ಸುಮಾರು 6.04 ಕ್ಕೆ ಚಂದ್ರನ ಮೇಲೆ ಸುಸೂತ್ರವಾಗಿ ಇಳಿಸಿತ್ತು. ಜುಲೈ 14ರಂದು ಉಡಾವಣೆಗೊಂಡಿದ್ದ ಚಂದ್ರಯಾನ 3 ನಿನ್ನೆ ಚಂದ್ರನ ಮೇಲ್ಮೈ ಮೇಲೆ ಸಾಫ್ಟ್ ಲ್ಯಾಂಡ್ ಆಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಸುಸೂತ್ರವಾಗಿ ಇಳಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ. ಚಂದ್ರಯಾನ-3ರ ಲ್ಯಾಂಡರ್‌ನ ಸಾಫ್ಟ್ ಲ್ಯಾಂಡಿಂಗ್‌ಗೆ 15 ರಿಂದ 17 ನಿಮಿಷಗಳನ್ನು ತೆಗೆದುಕೊಂಡಿತು. ಚಂದ್ರಯಾನ 3 ಅನ್ನು 14 ಜುಲೈ 2023ರಂದು ಮಧ್ಯಾಹ್ನ 2.30 ಕ್ಕೆ ಉಡಾವಣೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com