ಮಣ್ಣಲ್ಲಿ ಮಣ್ಣಾದ ಕನ್ನಡದ ಹಿರಿಯ ನಟಿ ಲೀಲಾವತಿ!

ಸಕಲ ಸರ್ಕಾರಿ ಗೌರವಗಳೊಂದಿಗೆ ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಅಂತ್ಯಕ್ರಿಯೆ ನೆರವೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನೆಲಮಂಗಲ: ಸಕಲ ಸರ್ಕಾರಿ ಗೌರವಗಳೊಂದಿಗೆ ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಅಂತ್ಯಕ್ರಿಯೆ ನೆರವೇರಿದೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 85 ವರ್ಷದ ಲೀಲಾವತಿ ಅವರು ನಿನ್ನೆ ನಿಧನರಾಗಿದ್ದರು. ನೆಲಮಂಗಲದ ಸೋಲದೇವನಹಳ್ಳಿಯ ತೋಟದಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ಪುತ್ರ ವಿನೋದ್ ರಾಜ್ ಅವರು ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಲೀಲಾವತಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕಲಾವಿದರೂ, ರಾಜಕಾರಣಿಗಳು ಹಾಗೂ ಸಾವಿರಾರೂ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

ರಾಜ್ ಕುಮಾರ್ -ಲೀಲಾವತಿ ಹಿಟ್ ಜೋಡಿ
ಲೀಲಾವತಿ ಅವರು ಬಹುಭಾಷೆ ಕಲಾವಿದೆ. ಯಾವುದೇ ಪಾತ್ರವಿರಲಿ ಅದಕ್ಕೆ ಜೀವ ತುಂಬುತ್ತಿದ್ದರು, ಅದು ನಾಯಕಿ, ತಾಯಿ ಪಾತ್ರ, ಅತ್ತೆ, ಅಜ್ಜಿ ಪಾತ್ರ ಹೀಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ಮತ್ತು ಸಾಮಾಜಿಕ, ಕೌಟುಂಬಿಕ, ಪೌರಾಣಿಕ ಚಿತ್ರಗಳ ಪಾತ್ರಗಳಲ್ಲಿ ಮನೋಜ್ಞವಾಗಿ ನಟನೆ ಮಾಡುತ್ತಿದ್ದರು. ನಾನು ಕಾಲೇಜು ವಿದ್ಯಾರ್ಥಿ ದೆಸೆಯಿಂದ ಅವರ ಚಲನಚಿತ್ರಗಳನ್ನು ನೋಡುತ್ತಿದ್ದೆ. ಅಂದು ನಮ್ಮ ಕಾಲದಲ್ಲಿ ರಾಜ್ ಕುಮಾರ್-ಲೀಲಾವತಿ ಎಂದರೆ ಬಹಳ ಜನಪ್ರಿಯ ಜೋಡಿ. ಅವರಿಬ್ಬರೂ ಅಭಿನಯಿಸಿದ್ದ ಎಲ್ಲಾ ಚಿತ್ರಗಳನ್ನು ನಾನು ನೋಡಿದ್ದೇನೆ. ಹೆಸರಿಗೆ ತಕ್ಕಂತೆ ಲೀಲಾವತಿಯವರು ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು. ಅಂತಹ ಅಭಿನಯ ಎಲ್ಲರಿಗೂ ಬರುವುದಿಲ್ಲ, ಅದು ರಾಜ್ ಕುಮಾರ್ ಗೆ ಸಿದ್ಧಿಸಿತ್ತು. ಲೀಲಾವತಿಯವರಿಗೂ ಕಲೆ ಒಲಿದಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೊಗಳಿದರು.

ಸಾಮಾಜಿಕ ಕ್ಷೇತ್ರದಲ್ಲಿಯೂ ಕೆಲಸ
ಸಾಮಾಜಿಕ ಕ್ಷೇತ್ರದಲ್ಲಿ ಕೂಡ ಲೀಲಾವತಿಯವರು ಕೆಲಸ ಮಾಡಿದ್ದಾರೆ. ಅವರು ಗಳಿಸಿದ ಹಣವನ್ನು ಅವರೇ ಬಚ್ಚಿಟ್ಟುಕೊಳ್ಳುತ್ತಿರಲಿಲ್ಲ. ಕಷ್ಟದಲ್ಲಿರುವವರಿಗೆ, ಬಡಬಗ್ಗರಿಗೆ ದಾನ ಮಾಡುತ್ತಿದ್ದರು. ಜೀವರಾಶಿಗಳನ್ನು ಅವರು ಪ್ರೀತಿಸುತ್ತಿದ್ದುದು, ರೈತಾಪಿ ಕೆಲಸ ತಾವೇ ಮಾಡುತ್ತಿದ್ದುದು ಬಹಳ ವಿಶೇಷ. ಲೀಲಾವತಿಯವರಿಗೆ ಬೇರೆಯವರ, ಪ್ರಾಣಿಗಳ ಕಷ್ಟ ಅರ್ಥವಾಗುತ್ತಿತ್ತು. ಅವರಿಗೆ ರಾಷ್ಟ್ರದಲ್ಲಿ ಕಲಾವಿದರಿಗೆ ಸಿಗಬೇಕಾದ ಅತ್ಯುನ್ನತ ಪ್ರಶಸ್ತಿ ಸಿಗಬೇಕಾಗಿತ್ತು ಎಂಬುದು ನನ್ನ ಭಾವನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com