ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಮತ್ತು ತಾರಾ ದಂಪತಿಗಳಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ರೀಲ್ ನಲ್ಲೂ ಒಂದಾಗಿದ್ದು, ಒಂದೇ ಸಿನಿಮಾದಲ್ಲಿ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ನಿರ್ದೇಶಕ ಪುನಿತ್ ಶ್ರೀನಿವಾಸ್ ಅವರ ಸೈಕಲಾಜಿಕಲ್ ಥ್ರಿಲ್ಲರ್‌ನಲ್ಲಿ ಮೊದಲ ಬಾರಿಗೆ ಒಟ್ಟಿಗೆ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುದ್ದಾರೆ. ರಾಪರ್ ಎಂದೇ ಖ್ಯಾತಿ ಪಡೆದಿರುವ ಚಂದನ್, ಇನ್ನೂ ಬಿಡುಗಡೆಯಾಗದಿರುವ ಸೂತ್ರದಾರಿ ಮತ್ತು ಎಲ್ರ ಕಾಲೆಳೆಯತ್ತೆ ಕಾಲ ಚಿತ್ರಗಳಲ್ಲಿ ನಟನಾಗಿ ಅಭಿನಯಿಸಿದ್ದಾರೆ. ವಿವಿಧ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ನಿವೇದಿತಾ ಗೌಡ ಅವರು ಇದೇ ಮೊದಲ ಬಾರಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರಕ್ಕೆ ಪುನೀತ್ ಶ್ರೀನಿವಾಸ್ ಅವರು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಳೆದ 12 ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಪುನೀತ್, ಅಧ್ಯಕ್ಷ, ಟಗರು ಜತೆಗೆ ತೆಲುಗಿನ ಹಲವು ಸಿನಿಮಾಗಳಿಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಪುನೀತ್ ಶ್ರೀನಿವಾಸ್ ಅವರು ಎಂ ಮೋಹನ್ ಕುಮಾರ್ ನಿರ್ಮಾಣದ ಇನ್ನೂ ಹೆಸರಿಡದ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ಎಂಎಸ್ ತ್ಯಾಗರಾಜ್ ಸಂಗೀತ ಸಂಯೋಜಿಸಿದರೆ, ಕರುಣಾಕರ್ ಅವರ ಛಾಯಾಗ್ರಹಣವಿದೆ. ಮುಂದಿನ ತಿಂಗಳು ಬೆಂಗಳೂರು ಮತ್ತು ಸುತ್ತಮುತ್ತ ಚಿತ್ರೀಕರಣ ಆರಂಭಿಸಲು ನಿರ್ಧರಿಸಲಾಗಿದ್ದು, ಚಿತ್ರದ ಶೀರ್ಷಿಕೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ.
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಂಭ್ರಮದಲ್ಲಿರುವ ನಿವೇದಿತಾ ಗೌಡ ಅವರು, “ಈ ಹಿಂದೆ ನನಗೆ ಸಿನಿಮಾ ಆಫರ್ ಬಂದಾಗ ನಾನು ಇನ್ನೂ ಓದುತ್ತಿದ್ದೆ. ನನ್ನ ವೃತ್ತಿಜೀವನದ ಹಾದಿಯಲ್ಲಿ ನಾನು ಸಂದಿಗ್ಧತೆಯಲ್ಲಿದ್ದೆ. ಆದರೆ ನಾನು ಅಂತಿಮವಾಗಿ ನಟನೆಯನ್ನು ಆಯ್ಕೆ ಮಾಡಿಕೊಂಡೆ. ರಿಯಾಲಿಟಿ ಶೋಗಳ ಅನುಭವ ಮತ್ತು ಚಂದನ್ ಅವರೊಂದಿಗೆ ಮ್ಯೂಸಿಕಲ್ ವೀಡಿಯೊಗಳಲ್ಲಿ ಕೆಲಸ ಮಾಡಿದ ಅನುಭವ ಕ್ಯಾಮರಾ ಎದುರಿಸಲು ಸಹಾಯಕವಾಯಿತು. ಪುನಿತ್ ಅವರ ಆಫರ್ ನನ್ನ ವೃತ್ತಿ ಜೀವನದಲ್ಲಿ ಒಂದು ಮಹತ್ವದ ತಿರುವು. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ನನ್ನ ಸಂತಸಕ್ಕೆ ಇದು ದೊಡ್ಡ ಕಾರಣವಾಗಿದೆ ಎಂದಿದ್ದಾರೆ.
ಚಂದನ್ ಮತ್ತು ನಾನು ಒಟ್ಟಿಗೆ ಸಿನಿಮಾ ಮಾಡುವ ಕನಸು ಕಂಡಿದ್ದೆವು ಮತ್ತು ಅದು ಕೊನೆಗೂ ನೆರವೇರಿದೆ. ಚಂದನ್ ಆರಂಭದಲ್ಲಿ ಹಿಂಜರಿದಿದ್ದರೂ. ಆದರೆ ನಿರ್ದೇಶಕರು ಮತ್ತು ನಾನು ಅವರ ಮನವೊಲಿಸಿದೆವು ಎಂದು ನಿವೇದಿತಾ ಗೌಡ ಹೇಳಿದ್ದಾರೆ.
Advertisement