'ಅಣ್ಣ From Mexico'ಗಾಗಿ ಮತ್ತೆ ಒಂದಾದ 'ಬಡವ ರಾಸ್ಕಲ್' ಜೋಡಿ
ಅಣ್ಣ From Mexico'ಗಾಗಿ 'ಬಡವ ರಾಸ್ಕಲ್' ಚಿತ್ರತಂಡ ಮತ್ತೆ ಒಂದಾಗಿದೆ. ಚಿತ್ರತಂಡ ಸದ್ದಿಲ್ಲದೇ ಶುಕ್ರವಾರ ಚಿತ್ರದ ಮುಹೂರ್ತ ಮುಗಿಸಿದ್ದು, ಚಿತ್ರೀಕರಣಕ್ಕಾಗಿ ಸಿದ್ಧತೆ ಶುರು ಮಾಡಿದೆ.
ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ 'ಅಣ್ಣ From Mexico' ಸಿನಿಮಾದ ಮುಹೂರ್ತ ನೆರವೇರಿದೆ. ರಾಯಲ್ ಸ್ಟುಡಿಯೋಸ್ನ ಪಾಲುದಾರರಾದ ಜಾನ್ವಿ ರಾಯಲ ಕ್ಲ್ಯಾಪ್ ಮಾಡಿದ್ದು, ನಿರ್ದೇಶಕ ಶಂಕರ್ ಗುರು ತಾಯಿ ಕ್ಯಾಮರಾಗೆ ಚಾಲನೆ ನೀಡಿದರು.
2021ರಲ್ಲಿ ತೆರೆಗೆ ಬಂದ ಬಡವ ರಾಸ್ಕಲ್ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ಧನಂಜಯ್ ನಿರ್ಮಾಪಕರಾಗಿ ಭಡ್ತಿ ಪಡೆದಿದ್ದರು. ತಮ್ಮದೇ ಡಾಲಿ ಪಿಕ್ಚರ್ಸ್‌ನಡಿ ನಿರ್ಮಿಸಿ, ನಟಿಸಿದ್ದ ಬಡವ ರಾಸ್ಕಲ್ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದರು. ಮೊದಲ ಹೆಜ್ಜೆಯಲ್ಲಿಯೇ ಗೆದ್ದಿದ್ದ ಶಂಕರ್ ಗುರು ಈಗ ಮತ್ತೊಂದು ಚೆಂದದ ಕಥೆ ರೆಡಿ ಮಾಡಿ ಡಾಲಿ ಅಭಿಮಾನಿಗಳನ್ನು ರಂಜಿಸಲು ಅಣಿಯಾಗಿದ್ದಾರೆ.
'ಅಣ್ಣ From Mexico' ಶಂಕರ್ ಗುರು ನಿರ್ದೇಶನದ ಎರಡನೇ ಸಿನಿಮಾ. ಪಕ್ಕಾ ಆ್ಯಕ್ಷನ್ ಫ್ಯಾಮಿಲಿ ಎಂಟರ್ಟೈನರ್ ಚಿತ್ರವಾಗಿದ್ದು, ದಿ ರಾಯಲ್ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸುತ್ತಿದ್ದಾರೆ. ಐರಾ ಫಿಲ್ಮ್ಸ್ ಕೂಡ ಜೊತೆಯಾಗಿ ಕೈ ಜೋಡಿಸಿದೆ. ಈ ಸಿನಿಮಾಗೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಜನವರಿ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಮೆಕ್ಸಿಕೋ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಏತನ್ಮಧ್ಯೆ ಡಾಲಿ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರಕಾಂಡ, ಪುಷ್ಪ-2, ಝೀಬ್ರಾ ಚಿತ್ರದಲ್ಲಿ ಧನಂಜಯ್ ಅವರು ನಟಿಸುತ್ತಿದ್ದಾರೆ. ಜೊತೆಗೆ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡೋ ಮುಖೇನ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ