ನಟ ದರ್ಶನ್ ಅಭಿನಯದ ಕಾಟೇರ ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು ಮೊದಲ ದಿನವೇ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಕಾಟೇರ ಚಿತ್ರಕ್ಕೆ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆ ವ್ಯಕ್ತವಾಗಿದೆ. ಇನ್ನು ಮೊದಲ ದಿನ 1,670 ಶೋಗಳನ್ನು ಕಂಡಿರುವ ಕಾಟೇರ ಚಿತ್ರದ ಮೊದಲ ದಿನವೇ 19.79 ಕೋಟಿ ಕಲೆಕ್ಷನ್ ಮಾಡಿದೆ ಎಂದು ಸ್ವತಃ ಚಿತ್ರ ತಂಡವೇ ಮಾಹಿತಿ ನೀಡಿದೆ.
ಕಾಟೇರ ಸಿನಿಮಾವನ್ನು ದರ್ಶನ್ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾವೆಂದು ಅಭಿಮಾನಿಗಳು ಹೊಗಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದರ್ಶನ್ ಸಿನಿಮಾಗಳು ಬರೀ ಮಾಸ್ ಪ್ರಿಯರಿಗೆ ಮಾತ್ರ ಸೀಮಿತವಾಗಿರುತ್ತದೆ ಎಂಬ ಆರೋಪವಿತ್ತು. ಆದರೆ ಕಾಟೇರ ಈ ಮಾತುಗಳನ್ನು ಸುಳ್ಳಾಗಿಸಿದೆ.
ಈ ಕಾಟೇರ ಸಿನಿಮಾದಲ್ಲಿ ಕತೆ ಮತ್ತು ಸಂದೇಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಹೀಗಾಗಿ ಕಟ್ಟಾ ಅಭಿಮಾನಿಗಳ ಜೊತೆ ಸಿನಿಮಾ ಪ್ರಿಯರು ಚಿತ್ರವನ್ನು ನೋಡುತ್ತಿದ್ದಾರೆ.
ಕಾಟೇರ ಚಿತ್ರ ಬಹುತಾರಾಗಣವನ್ನು ಹೊಂದಿದ್ದು ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನ ರಾಮ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಜಗಪತಿ ಬಾಬು, ಶೃತಿ ಅಭಿನಯಿಸಿದ್ದು, ಚಿತ್ರವನ್ನು ತರುಣ್ ಕಿಶೋರ್ ಸುಧೀರ್ ನಿರ್ದೇಶಿಸಿದ್ದಾರೆ.
Advertisement