ಹೊಸ ವರ್ಷಕ್ಕೆ ಶಿವಣ್ಣನ ಹೊಸ ಸಿನಿಮಾ: ಸೆಂಚ್ಯುರಿ ಸ್ಟಾರ್ ಗೆ ದಿನಕರ್ ತೂಗುದೀಪ್ ಆ್ಯಕ್ಷನ್ ಕಟ್!
ಖ್ಯಾತ ನಟ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರ ಹೊಸವರ್ಷಕ್ಕೆ ಘೋಷಣೆಯಾಗಿದೆ. ಹೆಸರಾಂತ ನಿರ್ದೇಶಕ ದಿನಕರ್ ತೂಗುದೀಪ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಬಿಂದ್ಯಾ ಮೂವೀಸ್ ಲಾಂಛನದಲ್ಲಿ ಆರ್ ಕೇಶವ್ ಹಾಗೂ ಬಿ.ಎಸ್ ಸುಧೀಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪಕ್ಕಾ ಮಾಸ್ ಹಾಗೂ ಕಮರ್ಷಿಯಲ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರಿಯದರ್ಶಿನಿ ರಾಮರೆಡ್ಡಿ ಕಥೆ ಬರೆದಿದ್ದಾರೆ. ಪ್ರೀ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗುತ್ತಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಯುತ್ತಿದೆ. ಮಹಾ ಶಿವರಾತ್ರಿ ಹಬ್ಬದ ವೇಳೆಗೆ ಶೀರ್ಷಿಕೆ ಬಿಡುಗಡೆಯಾಗಲಿದೆ.
ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಹಾಗೂ ದಿನಕರ್ ತೂಗುದೀಪ ಅವರ ಕಾಂಬಿನೇಶನ್ ನಲ್ಲಿ ಮೂಡಿಬರಲಿರುವ ಈ ಚಿತ್ರದ ಕುರಿತು ಅಭಿಮಾನಿ ವಲಯದಲ್ಲಿ ಹಾಗೂ ಚಿತ್ರೋದ್ಯಮದಲ್ಲಿ ಸಾಕಷ್ಟು ನಿರೀಕ್ಷೆಯಿದೆ.
ಜೊತೆ ಜೊತೆಯಲಿ ಸಿನಿಮಾದ ಮೂಲಕ ನಿರ್ದೇಶಕರಾದ ದಿನಕರ್ ತೂಗುದೀಪ ಅವರು ಆನಂತರ 'ನವಗ್ರಹ', 'ಸಾರಥಿ' ಸಿನಿಮಾಗಳನ್ನು ನಿರ್ದೇಶಿಸಿ, ಯಶಸ್ಸು ಕಂಡಿದ್ದರು. ಸದ್ಯ 'ಕಿಸ್' ಸಿನಿಮಾ ಹೀರೋ ವಿರಾಟ್ ಜೊತೆಗೆ 'ರಾಯಲ್' ಸಿನಿಮಾದ ಶೂಟಿಂಗ್ ಮುಗಿಸಿರುವ ಅವರು, ಈಗ ಶಿವರಾಜ್‌ಕುಮಾರ್ ಅವರ ಹೊಸ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಶಿವರಾತ್ರಿ ಹಬ್ಬದ ವೇಳೆಗೆ ಹೊಸ ಸಿನಿಮಾದ ಶೀರ್ಷಿಕೆ ಬಿಡುಗಡೆ ಆಗಲಿದೆ.
ಕೆಲ ವರ್ಷಗಳ ಹಿಂದೆ ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಘೋಷಣೆ ಆಗಿತ್ತು. ಆ ಸಿನಿಮಾಗೆ ದಿನಕರ್ ತೂಗುದೀಪ ಅವರೇ ನಿರ್ದೇಶನ ಮಾಡಬೇಕಿತ್ತು. ದುರದೃಷ್ಟವಶಾತ್ ಪುನೀತ್ ಅವರು ನಿಧನರಾದರು. ಹಾಗಾಗಿ, ಆ ಪ್ರಾಜೆಕ್ಟ್ ಅಲ್ಲಿಯೇ ಡ್ರಾಪ್ ಆಯಿತು. ಈಗ ಹುಟ್ಟಿಕೊಂಡಿರುವ ಹೊಸ ಅನುಮಾನವೆಂದರೆ, ಅಂದು ಅಪ್ಪುಗಾಗಿ ರೆಡಿ ಮಾಡಿಕೊಂಡಿದ್ದ ಸ್ಕ್ರಿಪ್ಟ್ ಅನ್ನೇ ಈಗ ಶಿವಣ್ಣನಿಗೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

