ವಾಲ್ಮೀಕಿ ಜಾತ್ರೆಗೆ ಬಾರದಿದ್ದಕ್ಕೆ ಅಭಿಮಾನಿಗಳ ಆಕ್ರೋಶ: ಆಹ್ವಾನವಿರಲಿಲ್ಲ ಎಂದ ಸುದೀಪ್; ಸ್ವಾಮೀಜಿ ಆಹ್ವಾನ ನೀಡಿದ್ದ ಫೋಟೋ ವೈರಲ್
ಬೆಂಗಳೂರು: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಗುರುಪೀಠದ ವಾಕ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ಗೈರಾಗಿದ್ದರಿಂದ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಅಲ್ಲಿರುವ ಕುರ್ಚಿಗಳನ್ನು ಒಡೆದು ಹಾಕಿದ್ದರು. ಸುದೀಪ್ ಕಾರ್ಯಕ್ರಮಕ್ಕೆ ಹಾಜರಿ ಹಾಕದೆ ಇರುವುದು ಏಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಇದಕ್ಕೆ ಈಗ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ‘ಸ್ನೇಹಿತರಿಗೆ ನಮಸ್ಕಾರ. ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು. ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ. ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ. ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ. ಆದರೂ, ಇಂದು ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ. ನಿಮ್ಮ ಜೊತೆ ಬೆರೆಯಲು ನನಗೂ ಅತೀವ ಆಸೆ . ಮುಂದೆ ಖಂಡಿತ ಬರುವೆ. ಪ್ರೀತಿ ಇರಲಿ. ಶಾಂತರೀತಿಯಿಂದ ವರ್ತಿಸಿ. ಪ್ರೀತಿಯೊಂದಿಗೆ ನಿಮ್ಮ ಕಿಚ್ಚ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಆದರೆ, ಆಯೋಜಕರಿಂದ ಆಹ್ವಾನ ಇರಲಿಲ್ಲ ಎಂದು ಸುದೀಪ್ ಟ್ವೀಟ್ ಮಾಡಿದ ಬೆನ್ನಲ್ಲೇ ಈ ಮೊದಲು ಪ್ರಸನ್ನಾನಂದಪುರಿ ಸ್ವಾಮೀಜಿ ಆಹ್ವಾನ ನೀಡಲು ಹೋಗಿರುವ ಫೋಟೋ ವೈರಲ್ ಆಗಿದೆ. ಸುದೀಪ್ ನಿವಾಸಕ್ಕೆ ಹೋಗಿ ಆಹ್ವಾನ ನೀಡಿದ್ದ ಫೋಟೋ ಇದಾಗಿದೆ. ಸುದೀಪ್ ಮನೆಯಲ್ಲಿ ಇಲ್ಲದ ಕಾರಣ ಅವರ ತಂದೆ ಸಂಜೀವ್ ಕೈಗೆ ಪ್ರಸನ್ನಾನಂದಪುರಿ ಸ್ವಾಮೀಜಿ ಆಹ್ವಾನ ನೀಡಿದ್ದರು. ಆಹ್ವಾನ ವಿಚಾರದಲ್ಲಿ ಸಾಕಷ್ಟು ಗೊಂದಲ ಮೂಡಿದೆ.
ದಾವಣಗೆರೆಯ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ಅಂಗವಾಗಿ ಗುರುವಾರ ಸಂಜೆ ನಡೆದ ಸಮಾರಂಭಕ್ಕೆ ನಟ ಕಿಚ್ಚ ಸುದೀಪ್ ಗೈರಾಗಿದ್ದರಿಂದ ಬೇಸರಗೊಂಡ ಅಭಿಮಾನಿಗಳು ವೇದಿಕೆ ಮುಂಭಾಗದ ಕುರ್ಚಿಗಳನ್ನು ಮುರಿದು ಆಕ್ರೋಶವ್ಯಕ್ತಪಡಿಸಿದರು. ವೇದಿಕೆ ಬಳಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ನೆಲಕ್ಕುರುಳಿಸಿದ ಅಭಿಮಾನಿಗಳನ್ನು ನಿಯಂತ್ರಿಸಲು ಮುಂದಾದ ಪೊಲೀಸರ ಪೈಕಿ ಮೂವರು ಗಾಯಗೊಂಡರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ