ಸಿನಿಮಾ ಮಾಡ್ಬೇಕು ಅಂತ 1 ರು. ಸಂಭಾವನೆ ಕೂಡ ಕೊಟ್ಟಿಲ್ಲ; ಕಿಚ್ಚನ ಪರ ಜಾಕ್ ಮಂಜು ಬ್ಯಾಟಿಂಗ್

ತಮ್ಮ ವಿರುದ್ಧ ಇಲ್ಲಸಲ್ಲದ ಮಾತುಗಳನ್ನು ಹೇಳಿದ್ದಾರೆ ಎಂಬ ಕಾರಣಕ್ಕೆ ಕುಮಾರ್ ವಿರುದ್ಧ ನಟ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೀಗ ಈ ವಿವಾದ ಮತ್ತೊಂದು ಹಂತಕ್ಕೆ ಹೋಗಿದೆ
ಸುದೀಪ್ ಮತ್ತು ಜಾಕ್ ಮಂಜು
ಸುದೀಪ್ ಮತ್ತು ಜಾಕ್ ಮಂಜು
Updated on

ನಟ 'ಕಿಚ್ಚ' ಸುದೀಪ್ ಮತ್ತು ನಿರ್ಮಾಪಕ ಎನ್ ಕುಮಾರ್ ಅವರ ನಡುವಿನ ವಿವಾದ ಸದ್ಯಕ್ಕೆ ತಣ್ಣಗೆ ಆಗುವಂತೆ ಕಾಣುತ್ತಿಲ್ಲ. 'ಸಂಭಾವನೆ ಪಡೆದುಕೊಂಡು ಸುದೀಪ್‌ ಸಿನಿಮಾ ಮಾಡುತ್ತಿಲ್ಲ' ಎಂದು ನಿರ್ಮಾಪಕ ಕುಮಾರ್ ಆರೋಪಿಸಿದ್ದರು.

ಇನ್ನು, ತಮ್ಮ ವಿರುದ್ಧ ಇಲ್ಲಸಲ್ಲದ ಮಾತುಗಳನ್ನು ಹೇಳಿದ್ದಾರೆ ಎಂಬ ಕಾರಣಕ್ಕೆ ಕುಮಾರ್ ವಿರುದ್ಧ ನಟ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೀಗ ಈ ವಿವಾದ ಮತ್ತೊಂದು ಹಂತಕ್ಕೆ ಹೋಗಿದೆ. 'ಸುದೀಪ್ ಅವರಿಗೆ ಸಿನಿಮಾ ಮಾಡುವ ವಿಚಾರವಾಗಿ ಯಾವುದೇ ಸಂಭಾವನೆಯನ್ನು ಕುಮಾರ್‌ ನೀಡಿಲ್ಲ' ಎಂದು ಸುದೀಪ್ ಅವರ ಆಪ್ತ, ನಿರ್ಮಾಪಕ 'ಜಾಕ್' ಮಂಜು ಹೇಳಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿ ನಡೆಸಿರುವ ಜಾಕ್ ಮಂಜು, 'ಮಾತೃಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಗೌರವ ಕೊಟ್ಟದ್ದೀವಿ, ಮುಂದೆಯೂ ಕೊಡುತ್ತೇವೆ. ಸುದೀಪ್‌ ಅವರ ಮನೆಗೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಬಂದಿದ್ದರು. ಎನ್‌ ಕುಮಾರ್ ಅವರ ಕುರಿತಾಗಿ ಸಂಪೂರ್ಣವಾಗಿ ಚರ್ಚೆ ಮಾಡಿದ್ದರು.

ಆಗ ಐದಾರು ವರ್ಷಗಳಲ್ಲಿ ಏನೆಲ್ಲ ಆಯ್ತು ಅನ್ನೋದರ ಬಗ್ಗೆ ಸುದೀಪ್ ಹೇಳಿದ್ದಾರೆ. ಇಷ್ಟೆಲ್ಲ ಆದಮೇಲೆ ವಾಣಿಜ್ಯ ಮಂಡಳಿಗೆ ಕುಮಾರ್ ದೂರು ಕೊಟ್ಟರು. ಆಗ ಚೇಂಬರ್‌ನಿಂದ ನಮಗೆ ಬಂದ ಪತ್ರಕ್ಕೆ ನಾವು ಆಗಲೇ ಉತ್ತರವನ್ನೂ ಕೊಟ್ಟಿದ್ದೇವೆ. ಐದಾರು ಪತ್ರ ಬರೆದ್ರು ಉತ್ತರ ಕೊಟ್ಟಿಲ್ಲ ಎಂಬ ತಪ್ಪು ಸಂದೇಶ ಎಲ್ಲ ಹಬ್ಬಿದೆ. ಅದಕ್ಕೆ ನಾವು ಇದನ್ನು ಹೇಳಬೇಕಾಯ್ತು' ಎಂದು ತಿಳಿಸಿದ್ದಾರೆ.

'ರನ್ನ’ ಸಿನಿಮಾ ಸಮಯದಲ್ಲಿ ಸುದೀಪ್-ಕುಮಾರ್ ಭೇಟಿಯಾಗಿದ್ದು ನಿಜ. ಕುಮಾರ್ ಆರ್ಥಿಕ ಕಷ್ಟದಲ್ಲಿದ್ದಾರೆ  ಎಂದು ಗೊತ್ತು. ಆ ಸಿನಿಮಾ ಬೇಗ ಸೆಟ್ಟೇರಲಿಲ್ಲ. ಕುಮಾರ್ ಅವರು ಒತ್ತಡದಲ್ಲಿ ಇದ್ದಿದ್ದರಿಂದ ಅವರು ಮಾತನಾಡುವ ರೀತಿ ಬದಲಾಯಿತು. ನಂತರ ಒಬ್ಬ ನಿರ್ದೇಶಕನನ್ನು ಸುದೀಪ್ ಆಯ್ಕೆ ಮಾಡಿದರು. ಆದರೆ ಆ ನಿರ್ದೇಶಕರು ಕೇಳಿದಷ್ಟು ಸಂಭಾವನೆ ನೀಡಲು ಕುಮಾರ್ ಒಪ್ಪಲಿಲ್ಲ.

2020ರ ಜನವರಿಯಲ್ಲಿ ಸುದೀಪ್ ‘ವಿಕ್ರಾಂತ್ ರೋಣ’ ಶುರು ಮಾಡಿದರು. ಅದಕ್ಕೆ ಮೂರು ವರ್ಷ ಹಿಡಿಯಿತು. ಅನಾರೋಗ್ಯ, ಕೆಲಸದ ಒತ್ತಡ ಮುಂತಾದ ಕಾರಣಗಳಿಂದ ಕುಮಾರ್ ಅವರನ್ನು ಭೇಟಿಯಾಗಲು ಸುದೀಪ್ ಅವರಿಗೆ ಸಾಧ್ಯವಾಗಲಿಲ್ಲ. ನಂತರ ಪ್ರಿಯಾ ಮೇಡಂ ಅವರ ಜೊತೆ ಕುಮಾರ್ ಮೀಟಿಂಗ್ ನಡೆಸಿದರು. ಕುಮಾರ್ ಅವರ ಕಷ್ಟ ಏನು ಎಂಬುದನ್ನು ಸುದೀಪ್‌ಗೆ ಹೇಳಲಾಯ್ತು.

ನಂತರ ಅವರನ್ನು ಕರೆಸಿ ತಾತ್ಕಾಲಿಕವಾಗಿ 5 ಕೋಟಿ ರೂಪಾಯಿ ಸಹಾಯ ಮಾಡಲು ಸುದೀಪ್ ಮುಂದಾದರು. ಆದರೆ ಕುಮಾರ್ ಅವರು ಕೋಪದಲ್ಲಿ ಅದನ್ನು ಒಪ್ಪಿಕೊಳ್ಳಲಿಲ್ಲ. ಈ ರೀತಿ ಭಿಕ್ಷೆಯ ಹಣ ಬೇಡ, ಸಿನಿಮಾ ಮಾಡಿ ಅಂತ ಪಟ್ಟು ಹಿಡಿದರು ಎಂದು ಜಾಕ್ ಮಂಜು ಹೇಳಿದ್ದಾರೆ.

ನನಗೆ ಬರಬೇಕಾದ ಹಣ ಕೊಡಿ ಎಂದು ಕುಮಾರ್ ಅವರು ಪಟ್ಟು ಹಿಡಿದಿದ್ದರು. ಅದು ಸುದೀಪ್‌ಗೆ ಬೇಸರ ಮೂಡಿಸಿತ್ತು. ನಾನು ಕುಮಾರ್ ಬಳಿ ಹಣ ತೆಗೆದುಕೊಂಡಿಲ್ಲ. ಸಹಾಯ ಕೇಳಿಕೊಂಡು ಬಂದವರು ಈಗ ಈ ರೀತಿ ಮಾತಾಡಿದ್ದು ಸರಿಯಲ್ಲ ಅಂತ ಸುದೀಪ್ ಕೊಂಚ ಗರಂ ಆಗಿದ್ದರು.

ಸುದೀಪ್ ಅವರಿಂದ ತಮಗೆ ಹಣ ಬರಬೇಕು. ಆ ಬಳಿಕ ನಿಮ್ಮ ಸಾಲ ತೀರಿಸುತ್ತೇನೆ ಅಂತ ಎನ್. ಕುಮಾರ್ ಅವರು ಕಂಡಕಂಡಲ್ಲಿ ಹೇಳಿಕೊಂಡು ತಿರುಗಾಡಿದ್ದಾರೆ ಎಂಬುದು ಜಾಕ್ ಮಂಜು ಆರೋಪಿಸಿದ್ದಾರೆ. ನಿರ್ಮಾಪಕ ಕುಮಾರ್‌ ಅವರ ಆರೋಪಕ್ಕೆ ದಾಖಲೆಗಳಿಲ್ಲದೇ ಮಾತಾಡ್ತಿದ್ದಾರೆ. ಅದಕ್ಕಾಗಿ ನಾವು ಕಾನೂನು ಹೋರಾಟಕ್ಕೆ ಹೋಗಿದ್ದೀವಿ ಎಂದು ಜಾಕ್ ಮಂಜು ಮಾತನಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com