
ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಡಾಲರ್ಸ್ ಪೇಟೆ ಸಿನಿಮಾ, ಹೊಸ ಕಲಾವಿದರು, ತಂತ್ರಜ್ಞರನ್ನು ಪರಿಚಯಿಸುತ್ತಿದೆ. ಸಿನಿಮಾ ಶೂಟಿಂಗ್ ನ್ನು ಪೂರ್ಣಗೊಳಿಸಿರುವ ಚಿತ್ರತಂಡ ಸೋಮವಾರ (ಮೇ.22) ರಂದು ಟೀಸರ್ ನ್ನು ಬಿಡುಗಡೆ ಮಾಡಿದೆ.
ಮದಗಜ, ಮರ್ಫಿಯಂತಹ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ಮೋಹನ್ ಎನ್ ಮುನಿನಾರಾಯಣಪ್ಪ ಡಾಲರ್ಸ್ ಪೇಟೆ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಪೂರ್ಣಪ್ರಮಾಣದ ನಿರ್ದೇಶಕರಾಗಿದ್ದಾರೆ.
ತೀವ್ರವಾದ ಆಕ್ಷನ್, ಗುಂಡೇಟು ಮತ್ತು ಭಯಂಕರ ಖಳನಾಯಕನನ್ನು ಹೊಂದಿರುವ ಡಾಲರ್ಸ್ ಪೇಟೆ ಸಿನಿಮಾದ ಟೀಸರ್ ದರೋಡೆಯ ರೋಚಕ ಕಥೆಯನ್ನು ತೆರೆದಿಡುತ್ತಿದೆ.
ಟೀಸರ್ ಬಿಡುಗಡೆಯ ಬಳಿಕ ಸಿನಿಮಾದ ಬಗ್ಗೆ ಸಿನಿಮಾ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ನಿರ್ದೇಶಕ ಮೋಹನ್, ಡಾಲರ್ಸ್ ಪೇಟೆ ನೈಜ ಘಟನೆ ಆಧಾರಿತ ಸಿನಿಮಾ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ತಮಿಳುನಾಡಿನ ಬ್ಯಾಂಕ್ ಹಾಗೂ ಫೋನ್ ಮೂಲಕ ನಡೆಯುವ ಸೈಬರ್ ವಂಚನೆಗೆ ಗುರಿಯಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಪ್ರಕರಣ, ಘಟನೆಗಳಿಂದ ಸ್ಪೂರ್ತಿ ಪಡೆದು ಮೂಡಿರುವ ಸಿನಿಮಾ ಆಗಿದೆ ಎನ್ನುತ್ತಾರೆ ಮೋಹನ್.
ನಾವು ಕಾಲ್ಪನಿಕ ಪಾತ್ರಗಳೊಂದಿಗೆ ಕಥೆಯನ್ನು ಹೆಣೆದಿದ್ದೇವೆ. ಇದರಲ್ಲಿ ಬ್ಯಾಂಕ್ ನ್ನು ನಿಭಾಯಿಸಲು ಹತಾಶೆಗೊಂಡ ಮ್ಯಾನೇಜರ್, ಭಯಭೀತರಾದ ಹೊಸ ಕ್ಲರ್ಕ್ ಮತ್ತು ಗರ್ಭಿಣಿ ಸಹಾಯಕ ಮ್ಯಾನೇಜರ್ ತನ್ನ ಸ್ವಂತ ಸಮಸ್ಯೆಗಳೊಂದಿಗೆ ಹೋರಾಡುತ್ತಿರುತ್ತಾರೆ. ಎಂದು ಮೋಹನ್ ಹೇಳಿದ್ದಾರೆ.
ಹೈಪರ್‌ಲಿಂಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ, ಆಕರ್ಷ್ ಕಮಲ ಮತ್ತು ವೆಂಕಟ್ ರಾಜು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತಾರಾಗಣದಲ್ಲಿ ದತ್ತು, ಕೌಶಲ್, ರಾಘವೇಂದ್ರ, ಹೊನ್ನವಳ್ಳಿ ಮತ್ತು ಮಹೇಂದ್ರ ಇದ್ದಾರೆ. ಪೆಂಟ್ರಿಕ್ಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿಯಲ್ಲಿ ಪೂಜಾ ಟಿವೈ ಈ ಚಿತ್ರವನ್ನು ನಿರ್ಮಿಸಿದ್ದು, ಸೂರಜ್ ಜೋಯಿಸ್ ಅವರ ಸಂಗೀತ ನಿರ್ದೇಶನವಿದೆ. ಆನಂದ್ ಸುಂದರೇಶ್ ಛಾಯಾಗ್ರಹಣ, ಮಹೇಶ್ ತೊಗಟ್ಟ ಸಂಕಲನವನ್ನು ನಿರ್ವಹಿಸಿದ್ದಾರೆ.
Advertisement