
ರಾಘವೇಂದ್ರ ಸ್ಟೋರ್ಸ್ ಚಿತ್ರದ ಸ್ಟಿಲ್
ಸಂತೋಷ್ ಆನಂದ್ರಾಮ್ ನಿರ್ದೇಶನದ ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ಟ್ರೇಲರ್ ಸೋಮವಾರ ಬಿಡುಗಡೆಯಾಗಿದೆ. ಇತ್ತೀಚಿಗೆ ಬಿಡುಗಡೆಯಾಗಿದ್ದ ಈ ಸಿನಿಮಾದ ಟೀಸರ್ ಮತ್ತು ಲಿರಿಕಲ್ ವೀಡಿಯೊ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಟ್ರೈಲರ್ ಬಿಡುಗಡೆಯಾಗುವುದರೊಂದಿಗೆ ಸಿನಿಮಾಸಕ್ತರಲ್ಲಿ ಮತ್ತಷ್ಟು ಆಸಕ್ತಿ ಕೆರಳಿಸಿದೆ.
ಈ ಹಿಂದೆ ಕೆಜಿಎಫ್ ಮತ್ತು ಕಾಂತಾರ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್‌ನ ನಿರ್ಮಾಪಕ ವಿಜಯ್ ಕಿರಗಂದೂರು ಚಿತ್ರದ ನಿರ್ಮಾಪಕರಾಗಿದ್ದು, ಈ ಪ್ರೊಡಕ್ಷನ್ ಹೌಸ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರೊಂದಿಗೆ ಇದೇ ಮೊದಲ ಬಾರಿಗೆ ಜಗ್ಗೇಶ್ ಒಂದಾಗಿದ್ದಾರೆ.

ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಮತ್ತು ರಾಜಕುಮಾರರಂತಹ ಕಮರ್ಷಿಯಲ್ ಚಿತ್ರ ನಿರ್ದೇಶನದ ನಂತರ ಅವರ ಹಾಸ್ಯ ಪ್ರಧಾನ ಚಿತ್ರದೊಂದಿಗೆ ಬಂದಿದ್ದಾರೆ. ಅದು ಜಗ್ಗೇಶ್ ಅವರ ಹಾಸ್ಯ ಶೈಲಿಯನ್ನು ಸಹ ಹೊಂದಿದೆ. ಈ ಚಿತ್ರವು ಇನ್ನೂ ಮದುವೆಯಾಗದೆ ವಧುವನ್ನು ಹುಡುಕುತ್ತಿರುವ 40 ವರ್ಷದ ಹಯವದನ ಜೀವನ ಸುತ್ತ ಸಾಗಲಿದೆ. ಈ ಚಿತ್ರ ಸಾಮಾಜಿಕ ಸಂದೇಶದೊಂದಿಗೆ ಹಾಸ್ಯ ಮತ್ತು ಭಾವನೆಗಳ ಪರಿಪೂರ್ಣ ಮಿಶ್ರಣವಾಗಿದೆ.
ಸಂತೋಷ್ ಆನಂದ್ರಾಮ್ ನಿರ್ದೇಶನದ ಹೊರತಾಗಿ ಚಿತ್ರ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಶ್ರೀಶಕುಡುವಳ್ಳಿ ಅವರ ಛಾಯಾಗ್ರಹಣವಿದೆ. ಜಗ್ಗೇಶ್ ನಾಯಕರಾಗಿರುವ ಈ ಚಿತ್ರದಲ್ಲಿ ಶ್ವೇತಾ ಶ್ರೀವಾತ್ಸವ್, ರವಿಶಂಕರ್ ಗೌಡ ಮತ್ತು ದತ್ತಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.