ನಾನು ಏನಾಗಿದ್ದೇನೋ ಅದೇ ಆಗಿರುತ್ತೇನೆ; ಆರ್​ಎಸ್​ಎಸ್ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ: ನಾಗತಿಹಳ್ಳಿ ಚಂದ್ರಶೇಖರ್

ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಹೆಸರು ಇದ್ದಕ್ಕಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣವಾಗಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ನಡೆಯುತ್ತಿರುವ ಶ್ರೀ ಗುರುಪೂಜಾ ಉತ್ಸವದ ಕಾರ್ಯಕ್ರಮ.
ನಾಗತಿಹಳ್ಳಿ ಚಂದ್ರಶೇಖರ್
ನಾಗತಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಹೆಸರು ಇದ್ದಕ್ಕಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣವಾಗಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ನಡೆಯುತ್ತಿರುವ ಶ್ರೀ ಗುರುಪೂಜಾ ಉತ್ಸವದ ಕಾರ್ಯಕ್ರಮ.

ಜುಲೈನಲ್ಲಿ ಬೆಂಗಳೂರಿನ ನಿಜಗುಣ ಕಲ್ಯಾಣಮಂಟಪದಲ್ಲಿ ಗುರುಪೂಜಾ ಉತ್ಸವದ ಕಾರ್ಯಕ್ರಮದ ನಡೆಯಲಿದ್ದು, ಅದರ ಅಧ್ಯಕ್ಷತೆಯನ್ನು ನಾಗತಿಹಳ್ಳಿ ಚಂದ್ರಶೇಖರ್ ವಹಿಸಲಿದ್ದಾರೆ ಎಂಬ ಆಹ್ವಾನ ಪತ್ರಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆರ್‌ಎಸ್‌ಎಸ್‌ ನಡೆಸುವ ಕಾರ್ಯಕ್ರಮಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸುತ್ತಿರುವ ಬಗ್ಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದವು. ಹೀಗಾಗಿ ಈ ಸಂಬಂಧ ನಾಗತಿಹಳ್ಳಿ ಸ್ಪಷ್ಟನೆ ನೀಡಿದ್ದಾರೆ.

ಸವನಗುಡಿಯ ನಿಜಗುಣ ಕಲ್ಯಾಣ ಮಂಟಪದಲ್ಲಿ ಜುಲೈ 16ರಂದು ಆರ್‌ಎಸ್‌ಎಸ್‌ ಆಯೋಜಿಸಿರುವ ಶ್ರೀ ಗುರುಪೂಜಾ ಉತ್ಸವದಲ್ಲಿ ತಾವು ಪಾಲ್ಗೊಳ್ಳುತ್ತಿಲ್ಲ ಎಂದು ಚಂದ್ರಶೇಖರ್‌ ಸ್ಪಷ್ಟಪಡಿಸಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ನಾಗತಿಹಳ್ಳಿ ಹೆಸರಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಅವರು, ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳುತ್ತಿಲ್ಲ. ಅದನ್ನು ನಾನು ಆಯೋಜಕರಿಗೂ ತಿಳಿಸಿದ್ದೆ.

ಆದರೆ, ಆಕಸ್ಮಿಕವಾಗಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಣವಾಗಿದೆ ಎಂದು ಆಯೋಜಕರು ತಿಳಿಸಿದ್ದು, ಅದಕ್ಕೆ ಕ್ಷಮೆಯನ್ನೂ ಕೋರಿದ್ದಾರೆ. ಕಾರ್ಯಕ್ರಮ ನಡೆಯುವ ದಿನದಂದು ನಾನು ವಿದೇಶದಲ್ಲಿ ಚಲನಚಿತ್ರವೊಂದರ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಚಂದ್ರಶೇಖರ್‌ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ನಮೂದಿಸಲಾಗಿತ್ತು. ಆದರೆ, ನಾಗತಿಹಳ್ಳಿ ಚಂದ್ರಶೇಖರ್‌ ಅವರು ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದರ ಕುರಿತಂತೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.

ನನ್ನನ್ನು ಅತ್ಯಂತ ಹತ್ತಿರದಿಂದ ಬಲ್ಲ, ನನ್ನನ್ನು ನಂಬುವ, ನನ್ನನ್ನು ಪ್ರೀತಿಸುವ, ನನ್ನನ್ನು ಬೆಳೆಸಿರುವ, ನನ್ನೊಂದಿಗೆ ಹಳ್ಳಿಯ ಕೆಲಸದಲ್ಲಿ ಕೈಜೋಡಿಸಿರುವ ಅಕ್ಕರೆಯ ಎಲ್ಲ ಮನಸ್ಸುಗಳಿಗೆ ಹೇಳುವ ಒಂದು ಮಾತು, ನಾನು ಏನಾಗಿದ್ದೀನೋ ಅದೇ ಆಗಿ ಇರುತ್ತೇನೆ. ನಾನು ಏನು ಮಾಡುತ್ತಿದ್ದೀನೋ ಅದು ಸರಿ ಇದೆ. ಅದನ್ನೇ ಮುಂದುವರೆಸುತ್ತೇನೆ. ತಪ್ಪು ತಿಳಿಯಲು, ತಪ್ಪು ಹರಡಲು ತುದಿಗಾಲಲ್ಲಿ ನಿಂತವರನ್ನು, ನಿತ್ಯ ಹೊಸ, ಹುಸಿ ರೋಮಾಂಚನ ಬಯಸುವ ಮಹನೀಯರನ್ನು ಮನ್ನಿಸಿ ಮುಂದೆ ಹೋಗೋಣ. ಇಲ್ಲಿ ನಾವೆಲ್ಲ ಮಾಡಲೇಬೇಕಾದ ಜನಪರ ಕೆಲಸಗಳು ಬಹಳಷ್ಟಿವೆ. ಮಾಡೋಣ, ಇನ್ನು ಮಾತು ಸಾಕು' ಎಂದು ಸೋಶಿಯಲ್ ಮೀಡಿಯಾದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಪೋಸ್ಟ್ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com