
ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್(Actor Shivarajkumar) ಗೆ ಇಂದು ಜುಲೈ 12ರಂದು ಹುಟ್ಟುಹಬ್ಬ ಸಂಭ್ರಮ. 61 ವರ್ಷಗಳನ್ನು ಪೂರೈಸಿ 62ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಕಳೆದ ಮೂರು ವರ್ಷಗಳಿಂದ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸದಿದ್ದ ಶಿವಣ್ಣ ಈ ಬಾರಿ ಮಾತ್ರ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ತಿಂದು ಹಂಚಿ ಸಂಭ್ರಮಪಟ್ಟಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಅಭಿಮಾನಿಗಳು ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಶಿವರಾಜ್ ಕುಮಾರ್ ಮನೆ ಬಳಿ ಜಮಾಯಿಸಿದ್ದರು.
ಶಿವರಾಜ್ ಕುಮಾರ್ ಕೈಯಲ್ಲಿ ಕೇಕ್ ಕಟ್ ಮಾಡಿಸಿ, ಶಿವಣ್ಣ ಮನೆ ಸುತ್ತ ಸ್ಕೈಶಾಟ್ಸ್ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.ಶಿವಣ್ಣ ಮನೆ ಸುತ್ತ ಫ್ಲೆಕ್ಸ್, ಕಟೌಟ್ ಗಳು ರಾರಾಜಿಸುತ್ತಿದೆ. ಪಟಾಕಿ ಸಿಡಿಸಿ, ಘೋಷಣೆ ಕೂಗುತ್ತಾ ಸಂಭ್ರಮಿಸಿದ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ಗೂ ಜೈಕಾರ ಹಾಕಿದ್ದಾರೆ.
ಅಭಿಮಾನಿಗಳ ಖುಷಿಯೇ ನಮಗೆ ಸಂತೋಷ: ಕಳೆದ 3 ವರ್ಷಗಳಿಂದ ಬರ್ತಡೇ ಆಚರಿಸಿಕೊಂಡಿರಲಿಲ್ಲ. ಕಳೆದ ವರ್ಷ ಅಪ್ಪು ಅಗಲಿಕೆಯಿಂದ ಆಚರಣೆ ಮಾಡಿಕೊಂಡಿರಲಿಲ್ಲ. ಬರ್ತಡೇ ಅಂದ್ರೆ ಅಭಿಮಾನಿಗಳಿಗೋಸ್ಕರ ಆಚರಿಸೋದು. ಮನೆಗೆ ಬರ್ತಾರೆ, ಖುಷಿಯಿಂದ ವಿಶ್ ಮಾಡ್ತಾರೆ ಎಂದರು ಶಿವಣ್ಣ.
ಇಂದು ಚಿತ್ರಗಳ ಪೋಸ್ಟರ್, ಟೈಟಲ್, ಸಿಡಿಪಿ ಬಿಡುಗಡೆ: ಸದ್ಯದಲ್ಲೇ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಮತ್ತು ಜೈಲರ್ ಸಿನಿಮಾಗಳು ಬಿಡುಗಡೆಯಾಗಲಿವೆ. ಘೋಸ್ಟ್ ನಲ್ಲಿ ವಿಭಿನ್ನವಾದ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಅಭಿಮಾನಿಗಳು ನೋಡಿ ಖುಷಿಪಡಬೇಕು. ಚಿಕ್ಕಂದಿನಿಂದಲೂ ರಜನಿಕಾಂತ್ ಅವರು ನಮ್ಮನ್ನ ನೋಡಿದ್ದಾರೆ. ಅವರನ್ನು ನೋಡುತ್ತಾ ನಾವು ಬೆಳೆದಿದ್ದೇವೆ. ನಮ್ಮ ಕುಟುಂಬ ಅವ್ರ ಕುಟುಂಬದ ನಡುವೆ ಹಿಂದಿನಿಂದಲೂ ಸ್ನೇಹ ಸಂಬಂಧವಿದೆ. ರಜನಿಕಾಂತ್ ಅವರ ಜೊತೆಗೆ ಜೈಲರ್ ಚಿತ್ರದಲ್ಲಿ ಅಭಿನಯಿಸಿರುವುದು ನನಗೆ ಖುಷಿ ತಂದಿದೆ. ಹತ್ತು ನಿಮಿಷ ಜೈಲರ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ. ಇಂದು ಸಂತೋಷ್ ಚಿತ್ರಮಂದಿರದಲ್ಲಿ ಘೋಸ್ಟ್ ಟೀಸರ್ ರಿಲೀಸ್ ಆಗಲಿದೆ ಎಂದು ಹೇಳಿದರು.
ಶಿವಣ್ಣ ಅವರ ಜನ್ಮದಿನದ ಪ್ರಯುಕ್ತ , ಡ್ಯಾನ್ಸ್ ಕಿಂಗ್ ಪ್ರಭುದೇವ ಕಾಂಬಿನೇಷನ್ ಇರುವ, ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ಹರಿಕೃಷ್ಣ ಸಂಗೀತದ, ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರದ ಟೈಟಲ್ ಇಂದು ಅನಾವರಣವಾಗಲಿದೆ. ಇನ್ನೊಂದೆಡೆ ಸಿಡಿಪಿ ಬಿಡುಗಡೆಯಾಗುತ್ತಿದೆ.
ಆನಂದ್ ಸಿನಿಮಾ ಎಂಟ್ರಿ, ಸತತ ಮೂರು ಚಿತ್ರಗಳ ಗೆಲುವು: ಶಿವಣ್ಣ 1986ರಲ್ಲಿ ಮೂಡಿಬಂದ ಆನಂದ್ ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪ್ರವೇಶವಾದರು. ಈ ಚಿತ್ರ ಆ ದಿನಗಳಲ್ಲಿ 250 ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡು ಕನ್ನಡ ಚಿತ್ರರಂಗದಲ್ಲಿ ಅದ್ಭುತ ದಾಖಲೆ ಬರೆಯಿತು. ಈ ಚಿತ್ರದ ‘ಟುವ್ವಿ ಟುವ್ವಿ’ ಹಾಡು ಆಗಿನ ಯುವಜನತೆಯ ಹಾಟ್ ಫೇವರೇಟ್ ಆಗಿತ್ತು. ಆನಂದ್ ಸಿನಿಮಾ ಬಳಿಕ ಶಿವರಾಜ್‌ಕುಮಾರ್ ರಥ-ಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ ಚಿತ್ರಗಳಲ್ಲಿ ಅಭಿನಯಿಸಿ ಅವುಗಳು ಸಹ ಶತದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಎಂಬ ಬಿರುದು ಶಾಶ್ವತವಾಗಿ ಸಿಕ್ಕಿತು.
Advertisement