'ನನ್ನ ತಾಯಿ ಅಂದು ಸಾಯಲು ನಿರ್ಧರಿಸಿದ್ದಾಗ ಹೆಗ್ಗಡೆಯವರು ಬುದ್ದಿಮಾತು ಹೇಳಿ ಕಳುಹಿಸಿದ್ದರು': ಧರ್ಮಸ್ಥಳದಲ್ಲಿ ನಟ ದರ್ಶನ್

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಿನ್ನೆ ಮೇ 3ರಂದು ಬುಧವಾರ ಸಂಜೆ ಧರ್ಮಸ್ಥಳದಲ್ಲಿ 51ನೇ ವರ್ಷದ ಸಾಮೂಹಿಕ ವಿವಾಹ ನಡೆಯಿತು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟ ದರ್ಶನ್
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟ ದರ್ಶನ್

ಧರ್ಮಸ್ಥಳ: ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಿನ್ನೆ ಮೇ 3ರಂದು ಬುಧವಾರ ಸಂಜೆ ಧರ್ಮಸ್ಥಳದಲ್ಲಿ 51ನೇ ವರ್ಷದ ಸಾಮೂಹಿಕ ವಿವಾಹ ನಡೆಯಿತು.

ಪ್ರೀತಿ, ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ, ಯಾವುದೇ ದುರಾಭ್ಯಾಸಕ್ಕೂ ತುತ್ತಾಗದೆ, ಬದುಕುತ್ತೇವೆ ಹೀಗೆಂದು ತುಳು ಮತ್ತು ಕನ್ನಡ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಹಾಗೂ ಆಯಾ ಜಾತಿಯ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನ ನೆರವೇರಿಸುವ ಮೂಲಕ ಧರ್ಮಸ್ಥಳದಲ್ಲಿ 201 ಜೋಡಿ ಸಪ್ತಪದಿ ತುಳಿದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಮೂಹಿಕ ವಿವಾಹ ನಡೆಯಿತು. 

ಒಟ್ಟು 52 ಅಂತರ್ಜಾತಿ ಜೋಡಿಗಳು, ಪರಿಶಿಷ್ಟ ಜಾತಿಗೆ ಸೇರಿದ 52 ಜೋಡಿಗಳು, ಕುರುಬ ಸಮುದಾಯಕ್ಕೆ ಸೇರಿದ ತಲಾ ಒಂಬತ್ತು ಜೋಡಿಗಳು ಮತ್ತು ವೀರಶೈವರು, ಪರಿಶಿಷ್ಟ ಪಂಗಡಕ್ಕೆ ಸೇರಿದ 11 ಜೋಡಿಗಳು ವಿವಾಹವಾದರು. ಚಿತ್ರನಟ ದರ್ಶನ್ ಮುಖ್ಯ ಅತಿಥಿ: ಚಿತ್ರನಟ ದರ್ಶನ್ ತೂಗುದೀಪ ಆಗಮಿಸಿ ನವಜೋಡಿಗಳಿಗೆ ಶುಭ ಹಾರೈಸಿ ಹಿತವಚನ ನುಡಿದರು. ಈ ವೇಳೆ ತಮ್ಮ ವಿವಾಹ ಕೂಡ ಧರ್ಮಸ್ಥಳದಲ್ಲಿ ನೆರವೇರಿತು ಎಂದು ದರ್ಶನ್ ನೆನಪು ಮಾಡಿಕೊಂಡರು. ದುಂದುವೆಚ್ಚಗಳನ್ನು ಮಾಡದೆ ಸರಳ ವಿವಾಹವಾಗುವುದು ಉತ್ತಮ ಎಂದರು.

ತಾಯಿಗೆ ಹೆಗ್ಗಡೆಯವರು ಬುದ್ದಿಮಾತು ಹೇಳಿ ಕಳುಹಿಸಿದ್ದರು: ಈ ಸಂದರ್ಭದಲ್ಲಿ ದರ್ಶನ್ ತಮ್ಮ ಜೀವನದ ಮುಖ್ಯವಾದ ವಿಷಯವನ್ನು ಹೇಳಿಕೊಂಡರು. ಅದು ತಮ್ಮ ತಂದೆ ಖ್ಯಾತ ನಟ ತೂಗುದೀಪ ಶ್ರೀನಿವಾಸ್ ನಿಧನ ಹೊಂದಿದ ಸಮಯ, ಮನೆಯಲ್ಲಿ ಆರ್ಥಿಕವಾಗಿ ಕಷ್ಟವಿತ್ತು. ನಾವು ಮಕ್ಕಳು ಚಿಕ್ಕವರು ಬೇರೆ, ಅಕ್ಕನ ಮದುವೆಯೂ ಆಗಿರಲಿಲ್ಲ. 

ಒಂದು ದಿನ ಇದ್ದಕ್ಕಿದ್ದ ಹಾಗೆ ಅಮ್ಮ ಧರ್ಮಸ್ಥಳಕ್ಕೆ ಹೋಗೋಣ, ಕಾರು ತೆಗಿ ಎಂದರು, ನಾವು ನಾಲ್ಕೇ ಮಂದಿ ಧರ್ಮಸ್ಥಳಕ್ಕೆ ಅಂದು ಕಾರಿನಲ್ಲಿ ಬಂದಿದ್ದು. ದೇವರ ದರ್ಶನವಾಯ್ತು. ನಂತರ ಹೆಗ್ಗಡೆಯವರನ್ನು ಭೇಟಿ ಮಾಡಲು ಅವರ ಮನೆಗೆ ಹೋದೆವು. ಬದುಕಿನ ಕಷ್ಟಗಳನ್ನು ತಡೆಯಲು ಸಾಧ್ಯವಾಗದೆ ಇರುವ ಮೂವರು ಮಕ್ಕಳನ್ನು ಕೆಆರ್ ಎಸ್ ಗೆ ತಳ್ಳಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ತಾಯಿ ಹೆಗ್ಗಡೆಯವರ ಮುಂದೆ ಹೇಳಿದರು.

ಆಗ ಹೆಗ್ಗಡೆಯವರು, 'ಅಲ್ಲಮ್ಮಾ ಇಬ್ಬಿಬ್ಬರು ಗಂಡುಮಕ್ಕಳನ್ನು ಬೆಳೆಸಿದ್ದೀಯಾ, ಒಳ್ಳೆಯದಾಗುತ್ತದೆ, ಹೋಗು' ಎಂದು ಹಿತವಚನ ಹೇಳಿ ಕಳುಹಿಸಿದರು. ಅವತ್ತು ಹೋಗು ಎಂದು ಕಳುಹಿಸಿದ್ದರಿಂದ ಇಂದು ಇಲ್ಲಿ ಬಂದು ನಾನು ನಿಂತಿದ್ದೇನೆ. ಇದು ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾತು, ಹಿತವಚನ ಮುಖ್ಯ ಕಾರಣ, ಧರ್ಮಸ್ಥಳಕ್ಕೆ ಬಂದವರು ಯಾರೂ ಬರಿಗೈಯಲ್ಲಿ ಹೋಗಿಲ್ಲ, ಎಲ್ಲರ ಬಾಳಲ್ಲಿಯೂ ಒಳ್ಳೆಯದಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com