ಜಗ್ಗೇಶ್ ನಟನೆಯ 'ಸರ್ವರ್ ಸೋಮಣ್ಣ' ಸಿನಿಮಾ ನಿರ್ದೇಶಿಸಿದ್ದ ತೆಲುಗಿನ ಪ್ರಸಿದ್ಧ ಡೈರೆಕ್ಟರ್ ಕೆ.ವಾಸು ನಿಧನ
ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ವಾಸು ಹೈದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಳೆದ ಕೆಲವು ವರ್ಷಗಳಿಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.
Published: 27th May 2023 10:59 AM | Last Updated: 27th May 2023 02:34 PM | A+A A-

ಕೆ.ವಾಸು
ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ವಾಸು ಅವರು ಹೈದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಳೆದ ಕೆಲವು ವರ್ಷಗಳಿಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲ ದಿನಗಳಿಂದ ಅವರ ಆರೋಗ್ಯ ತುಂಬಾನೇ ಹದಗೆಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅವರ ಮೊದಲ ಚಿತ್ರ ‘ಪ್ರಣಾಮ್ ಖರೀದು’ ಚಿತ್ರವನ್ನು ವಾಸು ನಿರ್ದೇಶಿಸಿದ್ದರು. ಈ ಚಿತ್ರದ ಮೂಲಕವೇ ಚಿರಂಜೀವಿ ಅವರು ಬೆಳ್ಳಿಪರದೆಗೆ ಕಾಲಿಟ್ಟರು. ವಾಸು ಅವರ ಕುಟುಂಬಕ್ಕೆ ಚಿತ್ರರಂಗದ ಜೊತೆ ಒಳ್ಳೆಯ ನಂಟಿತ್ತು.
ಕೇವಲ ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ. ಕನ್ನಡ ಚಿತ್ರರಂಗಕ್ಕೂ ಅವರ ಕೊಡುಗೆ ಅಪಾರ. ನವರಸ ನಾಯಕ ಜಗ್ಗೇಶ್ ನಟನೆಯ ಸರ್ವರ್ ಸೋಮಣ್ಣ ಸಿನಿಮಾವನ್ನು ಕೆ. ವಾಸು ನಿರ್ದೇಶನ ಮಾಡಿದ್ದರು.
ವಾಸು ಅವರು ಜನವರಿ 15, 1951ರಂದು ಜನಿಸಿದರು. 22ರ ಹರೆಯದಲ್ಲಿಯೇ ನಿರ್ದೇಶನ ಮಾಡಿ ಭೇಷ್ ಎನಿಸಿಕೊಂಡರು. ಚಿರಂಜೀವಿ ಜೊತೆ ವಾಸುಗೆ ಒಳ್ಳೆಯ ನಂಟಿತ್ತು. ಅವರು ಚಿರು ಜೊತೆ ಅನೇಕ ಹಿಟ್ ಸಿನಿಮಾಗಳನ್ನು ಮಾಡಿದರು. ‘ಕೊತ್ತಲ ರಾಯುಡು’ ಮೊದಲಾದ ಚಿತ್ರಗಳು ವಾಸು ನಿರ್ದೇಶನದಲ್ಲಿ ಮೂಡಿಬಂದಿದೆವೆ.
ಹಿರಿಯ ನಿರ್ದೇಶಕರು ಕೆ.ವಾಸು ಅವರು ಇನ್ನಿಲ್ಲ ಎಂಬ ಸುದ್ದಿ ಬಹಳ ದುಃಖ ತಂದಿದೆ. ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ನಾನು ಅವರ ಜೊತೆ ಹಲವು ಸಿನಿಮಾ ಮಾಡಿದ್ದೆ. ಅವರ ಕುಟುಂಬಕ್ಕೆ ನನ್ನ ಸಂತಾಪ’ ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.