ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾ ಆಗಸ್ಟ್ 15 ರಂದು ರಿಲೀಸ್ ಆಗಲಿದೆ. ಇಂದ್ರಜಿತ್ ಗೌರಿ ಚಿತ್ರದ ಮೂಲಕ ಮಗ ಸಮರ್ಜಿತ್ ಲಂಕೇಶ್ ಅವರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ. ಸಾನ್ಯಾ ಅಯ್ಯರ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ನಟ ಸುದೀಪ್ ಇತ್ತೀಚೆಗಷ್ಟೇ 'ಗೌರಿ' ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಮೂಲಕ ಹಲವು ವರ್ಷಗಳ ಗೆಳೆಯ ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಿನಿಮಾಗೆ ಸಾಥ್ ನೀಡಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದ ಹಿಂದಿನ ದಿನ ತೆರೆ ಕಾಣುತ್ತಿರುವ 'ಗೌರಿ' ಟ್ರೇಲರ್ ಅನಾವರಣಗೊಳಿಸಿ ಮಾತನಾಡಿದ ಸುದೀಪ್, ಇಂದ್ರಜಿತ್ ಮತ್ತು ನಾನು ಹಳೇ ಸ್ನೇಹಿತರು. ನಾವು ಬ್ಯಾಡ್ಮಿಂಟನ್ ಆಡುತ್ತಿದ್ದೆವು. ಆಗ ಇಂದ್ರಜಿತ್ ಅವರು ಲಂಕೇಶ್ ಅವರ ಮಗ ಎಂಬುದು ನನಗೆ ಗೊತ್ತಿರಲಿಲ್ಲ. ಆದ್ರೆ ಬಹಳ ಚೆನ್ನಾಗಿ ಆಟ ಆಡೋರು. ಇಂದು ತಂದೆ-ಮಗನಿಗೆ ಆಗುವಷ್ಟು ಸಂತೋಷ ಈ ಪ್ರಪಂಚದಲ್ಲಿ ಬೇರೆ ಯಾರಿಗೂ ಆಗಲು ಸಾಧ್ಯವೇ ಇಲ್ಲ. ಸಮರ್ಜಿತ್‍ನ ಯಶಸ್ಸು ಅವರೊಬ್ಬರ ಯಶಸ್ಸಾಗಿರುವುದಿಲ್ಲ. ಅದರಲ್ಲಿ ಇಂದ್ರಜಿತ್ ಯಶಸ್ಸೂ ಇದೆ. ಇನ್ನೂ ಸಾನ್ಯಾ ಅವರು ಉತ್ತಮ ನಟಿ ಅಷ್ಟೇ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. ಈ ವಿಚಾರ ನನಗೆ ಬಿಗ್ ಬಾಸ್ ಸಮಯದಲ್ಲಿ ತಿಳಿಯಿತು ಎಂದು ತಿಳಿಸಿದರು.
ಇಂದ್ರಜಿತ್ ಲಂಕೇಶ್ ಫ್ಯಾಷನೇಟ್ ನಿರ್ದೇಶಕ. ಹೊಸ ಹೊಸ ನಾಯಕಿಯರನ್ನು ಪರಿಚಯಿಸುವುದರಲ್ಲಿ ಮೊದಲಿಗರು. ಸಿನಿಮಾ ಕೂಡಾ ಅಷ್ಟೇ ಚೆನ್ನಾಗಿ ಮಾಡುತ್ತಾರೆ. ನಾನು ಅವರ ತುಂಟಾಟ ಚಿತ್ರದ ಹಾಡೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಅವರ ಡೆಡಿಕೇಷನ್ ಇಷ್ಟ ಆಗಿತ್ತು. ನಾವಿಬ್ಬರೂ ಬ್ಯಾಡ್ಮಿಂಟನ್ ಜೊತೆಗೆ ಸಿನಿಮಾ ಗೆಳೆಯರಾದೆವು. ಬಹು ವರ್ಷದ ಸ್ನೇಹ ಇದು. ಅವರ ಬಗ್ಗೆ ಸಖತ್ ಕ್ಯೂರಿಯಾಸಿಟಿಯ ವಿಷಯಗಳಿವೆ. ಆದ್ರೆ ಹೇಳಲು ಆಗೋಲ್ಲ ಎಂದು ಸುದೀಪ್ ತಮಾಷೆ ಮಾಡಿದರು. ಸಮರ್ಜಿತ್ ಯಶಸ್ವಿಯಾಗುವುದರಲ್ಲಿ ನನಗೆ ಸಂದೇಹವಿಲ್ಲ. ಆದರೆ ಇಂದ್ರಜಿತ್ ಅವರು ಕೋಯಿ ಮಿಲ್ ಗಯಾದಂತಹ ಚಿತ್ರವನ್ನು ನಿರ್ಮಿಸುತ್ತಾರೆಯೇ ಎಂದು ನೋಡಲು ನನಗೆ ಕುತೂಹಲವಿದೆ" ಎಂದು ಸುದೀಪ್ ನಕ್ಕರು.
ಗೌರಿ ಅವರು ಪ್ರಿಯಾಂಕಾ ಉಪೇಂದ್ರ, ಅಕುಲ್ ಬಾಲಾಜಿ, ಮಾಲತಿ ಸುಧೀರ್, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಸಂಪತ್ ಮೈತ್ರೇಯ, ಚಂದು ಗೌಡ ಮತ್ತು ಸ್ವೀಜಲ್ ಸೇರಿದಂತೆ ಸಮಗ್ರ ತಾರಾಗಣವನ್ನು ಒಟ್ಟುಗೂಡಿಸಿದ್ದಾರೆ. ಈ ಚಿತ್ರಕ್ಕೆ ಚಂದನ್ ಶೆಟ್ಟಿ ಮತ್ತು ಜಸ್ಸಿ ಗಿಫ್ಟ್ ಅವರ ಸಂಗೀತ ಸಂಯೋಜನೆ ಹಾಗೂ ಎಜೆ ಶೆಟ್ಟಿ ಮತ್ತು ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ.
Advertisement