ಬೆಂಗಳೂರು: ಕನ್ನಡ ಚಿತ್ರರಂಗ ಇತ್ತೀಚೆಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳಿಂದ ಹೊರಬಂದು ಚಿತ್ರರಂಗದಲ್ಲಿ ತೊಡಗಿಸಿಕೊಂಡವರಿಗೆಲ್ಲರಿಗೂ ಒಳಿತಾಗಬೇಕು ಎಂದು ಬುಧವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ, ಹೋಮ -ಹವನ ಮಾಡಲಾಗಿದೆ.
ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಅವರು ಈ ಪೂಜೆಯಲ್ಲಿ ಭಾಗಿಯಾಗಿ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ನಟ ದರ್ಶನ್ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿರುವುದು ಕನ್ನಡ ಚಿತ್ರರಂಗದ ಪಾಲಿಗೆ ಬೇಸರದ ಸಂಗತಿ. ಅವರಿಗೆ ಕಾನೂನಿನ ಕಂಟಕ ಎದುರಾಗಿದೆ.
ದರ್ಶನ್ ಪ್ರಕರಣದಿಂದ ಹೊರಬರಲಿ ಎಂದು ಕಲಾವಿದರ ಸಂಘದಲ್ಲಿ ಪೂಜೆ, ಹೋಮ ಮಾಡಲಾಗಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಜಗ್ಗೇಶ್ ಅವರು, ನನಗೆ ಕೂಡ ಆರಂಭದಲ್ಲಿ ಅದೇ ರೀತಿಯ ಮಾಹಿತಿ ಬಂತು. ದರ್ಶನ್ಗಾಗಿ ಪೂಜೆ ಆಗಿದ್ದರೆ ನಾನು ಕೂಡ ಬರುತ್ತಿರಲಿಲ್ಲ. ಅದು ಬೇರೆ ಆಯಾಮ ಪಡೆದುಕೊಳ್ಳುತ್ತಿತ್ತು. ಆದರೆ ಇದು ಅದಲ್ಲ. ಕಲಾವಿದರ ಒಳಿತಿಗಾಗಿ ಈ ಪೂಜೆ ನಡೆದಿದೆ ಎಂದರು.
ಕೆಲವರಿಗೆ ಮಾಹಿತಿ ಕೊರತೆ ಆಗಿರಬಹುದು. ಹಾಗಾಗಿ ಅಪಾರ್ಥ ಮಾಡಿಕೊಂಡಿದ್ದಾರೆ. ಅನೇಕರು ಬೇರೆ ವಲಯಗಳಿಂದ ನನಗೆ ಫೋನ್ ಮಾಡಿ ಕೇಳಿದರು. ನನಗೂ ಅನುಮಾನ ಬಂತು. ವಿಚಾರಿಸಿದಾಗ ಆ ಥರ ಅಲ್ಲ ಎಂಬುದು ಗೊತ್ತಾದಮೇಲೆ ನಾನು ಕೂಡ ಬಂದೆ ಎಂದು ಜಗ್ಗೇಶ್ ಹೇಳಿದ್ದಾರೆ.
ಕೆಲವು ದಿನಗಳಿಂದ ಕನ್ನಡ ಚಿತ್ರರಂಗ ಬಹಳ ಸಂಕಷ್ಟಕ್ಕೆ ಸಿಲುಕುತ್ತಿದೆ. ಹತ್ತಾರು ಸಿನಿಮಾಗಳು ತೆರೆಕಂಡರೂ ಸಹ ಚಿತ್ರತಂಡ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ಯಾವ ಚಿತ್ರಕ್ಕೂ ಸಿಗುತ್ತಿಲ್ಲ. ಕೋವಿಡ್ ನಂತರ ಜನ ಚಿತ್ರಮಂದಿರಗಳಿಗೆ ಬರುವುದನ್ನು ಕಡಿಮೆ ಮಾಡುತ್ತಿದ್ದು, ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರರಂಗವನ್ನು ಕಾಪಾಡುವಂತೆ ಕಲಾವಿದರ ಸಂಘ ದೇವರ ಮೊರೆ ಹೋಗಿದೆ ಎಂದು ಈಗಾಗಲೇ ಪೂಜೆ ಹೋಮ ಹವನದ ನೇತೃತ್ವ ವಹಿಸಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ.
Advertisement