
ಬೆಂಗಳೂರು: ಕನ್ನಡ ಚಿತ್ರರಂಗ ಇತ್ತೀಚೆಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ, ಅವುಗಳಿಂದ ಹೊರಬಂದು ಚಿತ್ರರಂಗದಲ್ಲಿ ತೊಡಗಿಸಿಕೊಂಡವರಿಗೆಲ್ಲರಿಗೂ ಒಳಿತಾಗಬೇಕು ಎಂದು ಆಶಿಸಿ ಕನ್ನಡ ಚಿತ್ರರಂಗದ ಕಲಾವಿದರ ಸಂಘ ಇಂದು ಬುಧವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ ಹೋಮ -ಹವನ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ಕಲಾವಿದರು ಭಾಗಿಯಾಗಿದ್ದಾರೆ.
ಇತ್ತೀಚಿನ ಕೆಲ ದಿನಗಳಿಂದ ಕನ್ನಡ ಚಿತ್ರರಂಗ ಬಹಳ ಸಂಕಷ್ಟಕ್ಕೆ ಸಿಲುಕುತ್ತಿದೆ. ಹತ್ತಾರು ಸಿನಿಮಾಗಳು ತೆರೆಕಂಡರೂ ಸಹ ಚಿತ್ರತಂಡ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ಯಾವ ಚಿತ್ರಕ್ಕೂ ಸಿಗುತ್ತಿಲ್ಲ. ಕೋವಿಡ್ ನಂತರ ಜನ ಚಿತ್ರಮಂದಿರಗಳಿಗೆ ಬರುವುದನ್ನು ಕಡಿಮೆ ಮಾಡುತ್ತಿದ್ದು, ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರರಂಗವನ್ನು ಕಾಪಾಡುವಂತೆ ಕಲಾವಿದರ ಸಂಘ ದೇವರ ಮೊರೆ ಹೋಗಿದೆ ಎಂದು ಈಗಾಗಲೇ ಪೂಜೆ ಹೋಮ ಹವನದ ನೇತೃತ್ವ ವಹಿಸಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಮಾತನಾಡಿಸಿದಾಗ ಕೆಲವು ಹಿರಿಯ ಕಲಾವಿದರು ಪ್ರತಿಕ್ರಿಯಿಸಿದ್ದಾರೆ. ಹಿರಿಯ ನಟಿ ಗಿರಿಜಾ ಲೋಕೇಶ್ ಮಾತನಾಡಿ, ಇಡೀ ಚಿತ್ರರಂಗದ ಒಳಿತಿಗಾಗಿ ಇಂದು ನಾವೆಲ್ಲರೂ ಸೇರಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ. ಇಲ್ಲಿ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಎಲ್ಲರೂ ಸೇರಿದ್ದಾರೆ, ಯಾರೋ ಒಬ್ಬರ ಒಳಿತಿಗಾಗಿ ಮಾಡುತ್ತಿರುವುದಲ್ಲ ಎಂದರು.
ನಟ ದರ್ಶನ್ ಜೈಲಿನಿಂದ ಬಿಡುಗಡೆಯಾಗಲು ಇಂದು ಹೋಮ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆಯಲ್ಲ ಎಂದಾಗ, ನಟ ದರ್ಶನ್ ಕೂಡ ನಮ್ಮ ಚಿತ್ರರಂಗ ಕುಟುಂಬದ ಭಾಗ, ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಕೂಡ ಸಾಕಷ್ಟಿದೆ. ಒಬ್ಬ ಸ್ಪುರದ್ರೂಪಿ ನಟ ಈ ಮಟ್ಟಕ್ಕೆ ಬೆಳೆದು ಇಂದು ಯಾವುದೋ ಕೆಟ್ಟ ಘಳಿಗೆಯಲ್ಲಿ ಕ್ರೂರ ಮನಸ್ಥಿತಿ ತಂದು ಅವರ ಕೈಯಲ್ಲಿ ಕೆಟ್ಟ ಕೆಲಸ ಮಾಡಿಸಿರಬಹುದು. ಅವರಿಂದ ಅನೇಕರ ಜೀವನಕ್ಕೆ ದಾರಿಯಾಗಿದೆ, ಅನೇಕರಿಗೆ ಅವರು ಸಹಾಯ ಮಾಡಿದ್ದಾರೆ ಎಂದರು.
ತಮ್ಮ ಸಂಕಷ್ಟದಿಂದ ಹೊರಬಂದು ದರ್ಶನ್ ಮುಂದೆ ಉತ್ತಮ ಜೀವನ ನಡೆಸಬೇಕು ಎಂಬುದು ನಮ್ಮ ಆಶಯವಾಗಿದೆ. ಹಾಗಾಗಿ ಇಂದು ಪೂಜೆಯಲ್ಲಿ ನಟ ದರ್ಶನ್ ಗೂ ಒಳಿತಾಗಲಿ ಎಂದು ಬೇಡುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು.
ದರ್ಶನ್ಗಾಗಿ ಹೋಮ ಮಾಡಿದ್ರೆ ತಪ್ಪೇನು? ಈಗ ದರ್ಶನ್ ಮೇಲೆ ಆರೋಪ ಬಂದಿದೆ ಅಂತ ಆತನನ್ನು ದೂರ ತಳ್ಳೋದು ತಪ್ಪು. ಆಳಿಗೊಂದು ಕಲ್ಲು ಹೊಡೆಯೋದು ಸರಿಯಲ್ಲ. ಆತ ತಪ್ಪು ಮಾಡಿದ್ದರೆ ಅವನು ಮಾಡಿದ್ದು ಸರಿ ಎಂದು ನಾವು ಹೇಳುತ್ತಿಲ್ಲ. ಇಡೀ ಸಮಗ್ರ ಇಂಡಸ್ಟ್ರಿ ಒಳಿತಿಗೆ ಮಾಡ್ತಿರೋ ಹೋಮ ಇದು ಎಂದು ಹೇಳಿದ್ದಾರೆ.
ಇನ್ನು ಹಿರಿಯ ನಟಿ ವನಿತಾ ವಾಸು ಮಾತನಾಡಿ, ನಟ ದರ್ಶನ್ ಗೋಸ್ಕರ ಇಂದು ಪೂಜೆ ಹೋಮ ಮಾಡುತ್ತಿರುವುದಲ್ಲ, ಇಡೀ ಚಿತ್ರರಂಗದ ಒಳಿತಿಗೆ, ದರ್ಶನ್ ಕೂಡ ಚಿತ್ರರಂಗದ ಭಾಗವಾಗಿರುವುದರಿಂದ ಅವರಿಗೆ ಕೂಡ ದೇವರು ಮುಂದಿನ ದಿನಗಳಲ್ಲಿ ಒಳಿತು ನೀಡಲಿ ಎಂದು ಕೇಳಿಕೊಂಡರು.
ದೊಡ್ಡಣ್ಣ ಹಾಗೂ ಅವರ ಪತ್ನಿ ವಿಶೇಷ ಪೂಜೆ ಮತ್ತು ಹವನವನ್ನು ಮುನ್ನಡೆಸುತ್ತಿದ್ದಾರೆ. ಉಡುಪಿಯ ಖ್ಯಾತ ಜ್ಯೋತಿಷಿ ಪ್ರಕಾಶ್ ಅಣ್ಣಮ್ಮಯ್ಯ ನೇತೃತ್ವದಲ್ಲಿ ಹೋಮ ಹವನಗಳು ನಡೆಯುತ್ತಿವೆ. ಕಲಾವಿದರ ಸಂಘದಲ್ಲಿ ಹೋಮ ಎಂಬ ವಿಚಾರ ಹೊರಬೀಳ್ತಿದ್ದಂತೆ ಹಲವು ಊಹಾಪೋಹಗಳು ಎದ್ದಿದ್ದವು. ಈ ಪೂಜೆಯನ್ನ ಪರಪ್ಪನ ಅಗ್ರಹಾರದಲ್ಲಿರೋ ನಟ ದರ್ಶನ್ ಅವರಿಗಾಗಿ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
Advertisement