ಕೊಚ್ಚಿ: ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(AMMA)ದ ಪ್ರಮುಖ ಸದಸ್ಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬಂದ ನಂತರ ತೀವ್ರ ಒತ್ತಡಕ್ಕೆ ಸಿಲುಕಿರುವ AMMA ಅಧ್ಯಕ್ಷ, ನಟ ಮೋಹನ್ ಲಾಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಂಘದ ಸಂಪೂರ್ಣ ಕಾರ್ಯಕಾರಿ ಸಮಿತಿಯನ್ನೂ ವಿಸರ್ಜಿಸಲಾಗಿದ್ದು, 500 ಸದಸ್ಯರ ಸಂಘಟನೆ ಈಗ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ.
“ಸಮಿತಿಯ ಕೆಲವು ಸದಸ್ಯರ ವಿರುದ್ಧ ಕೆಲವು ನಟಿಯರು ಮಾಡಿದ ಲೈಂಗಿಕ ಕಿರುಕುಳ ಆರೋಪಗಳ ಹಿನ್ನಲೆಯಲ್ಲಿ, ನೈತಿಕ ಹೊಣೆ ಹೊತ್ತುಕೊಂಡು ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲು AMMA ನಿರ್ಧರಿಸಿದೆ. ಎರಡು ತಿಂಗಳೊಳಗೆ ಚುನಾವಣೆಯ ನಂತರ ಹೊಸ ಸಮಿತಿಯನ್ನು ರಚಿಸಲಾಗುವುದು" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಲಯಾಳಂ ಸಿನಿಮಾ ರಂಗದಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳ ಕುರಿತ ಆಫಾತಕಾರಿ ವಿಷಯಗಳನ್ನು ನ್ಯಾಯಮೂರ್ತಿ ಕೆ. ಹೇಮಾ ಸಮಿತಿ ವರದಿ ಬಿಚ್ಚಿಟ್ಟಿತ್ತು.
ಇದರ ಬೆನ್ನಲ್ಲೇ ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಂಜಿತ್ ವಿರುದ್ದ ಬೆಂಗಾಲಿ ನಟಿ ಶ್ರೀಲೇಕಾ ಮಿತ್ರಾ ಮತ್ತು ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ವಿರುದ್ದ ನಟಿ ರೇವತಿ ಸಂಪತ್ ಅವರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
ತಮ್ಮ ವಿರುದ್ದ ಆರೋಪ ಕೇಳಿ ಬಂದ ಬಳಿಕ ರಂಜಿತ್ ಮತ್ತು ಸಿದ್ದೀಕ್ ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಂಜಿತ್ ವಿರುದ್ದ ನಟಿ ಶ್ರೀಲೇಕಾ ಮಿತ್ರಾ ಮತ್ತು ಸಿದ್ದೀಕ್ ವಿರುದ್ದ ರೇವತಿ ಸಂಪತ್ ದೂರು ದಾಖಲಿಸಿದ್ದಾರೆ. ರೇವತಿ ದೂರಿಗೆ ಪ್ರತಿಯಾಗಿ ಸಿದ್ದೀಕ್ ಕೂಡ ದೂರು ನೀಡಿದ್ದಾರೆ.
Advertisement