ಡಿಸೆಂಬರ್ ಕೊನೆಯ ವಾರದಲ್ಲಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ರಕ್ತ ಕಾಶ್ಮೀರ' ಚಿತ್ರ ರಿಲೀಸ್!
ಹೆಸರಾಂತ ಚಲನಚಿತ್ರ ನಿರ್ಮಾಪಕ ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಬುಧವಾರ ತಮ್ಮ ಬಹುನಿರೀಕ್ಷಿತ ಚಿತ್ರ 'ರಕ್ತ ಕಾಶ್ಮೀರ' ಸಿನಿಮಾ ಘೋಷಣೆ ಮಾಡಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಉಪೇಂದ್ರ ಮತ್ತು ರಮ್ಯಾ ನಟಿಸಿರುವ ಈ ಚಿತ್ರವು ಪ್ರಸ್ತುತ ಸೆನ್ಸಾರ್ ಪ್ರಕ್ರಿಯೆಯಲ್ಲಿದೆ ಮತ್ತು ಈ ತಿಂಗಳ ಕೊನೆಯಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.
ಹಿರಿಯ ಚಲನಚಿತ್ರ ನಿರ್ಮಾಪಕರು ಬರೆದು ನಿರ್ದೇಶಿಸಿದ, ರಕ್ತ ಕಾಶ್ಮೀರಾ ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಪುನಶ್ಚೇತನದ ಕಥೆಯಾಗಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದ್ದು, ಸಿನಿಮಾದ ಪ್ರಮುಖ ಟ್ವಿಸ್ಟ್ ಇದೇ ಆಗಿರಲಿದೆ. ದೇಶದ ಗಡಿಗಳಲ್ಲಿ ಮಾತ್ರವಲ್ಲ. ಬೆಂಗಳೂರಿನಲ್ಲೂ ಉಗ್ರಗಾಮಿಗಳ ಹಾವಳಿ ಇದೆ. ಅವರನ್ನು ಹೇಗೆ ನಿರ್ಮೂಲನೆ ಮಾಡಬೇಕು ಎಂಬ ಕಥಾವಸ್ತುವನ್ನೂ ಈ 'ರಕ್ತ ಕಾಶ್ಮೀರ' ಸಿನಿಮಾ ಹೊಂದಿದೆಯಂತೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದು, ಎಂಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ. ಎಂಡಿಎಂ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ತಾರಾಗಣದಲ್ಲಿ ದೊಡ್ಡಣ್ಣ, ಓಂಪ್ರಕಾಶ್ ರಾವ್, ಅನಿಲ, ಮತ್ತು ಕುರಿ ಪ್ರತಾಪ್ ಮುಂತಾದ ಕಲಾವಿದರು ನಟಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಉಪೇಂದ್ರ, ರಮ್ಯಾ ಅವರ ಕಾಂಬಿನೇಷನ್‌ನಲ್ಲಿ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಎಂಬ ಸಿನಿಮಾವೊಂದು ತಯಾರಾಗಿತ್ತು. ಅದರ ಹಾಡುಗಳು ಬಿಡುಗಡೆ ಕೂಡ ಆಗಿತ್ತು. ಆದರೆ ಸಿನಿಮಾ ಮಾತ್ರ ಹೊರಗೆ ಬರಲೇ ಇಲ್ಲ. ಕೊನೆಗೆ ಆ ಸಿನಿಮಾದ ಮೇಲಿನ ನಿರೀಕ್ಷೆಯನ್ನೇ ಸಿನಿಪ್ರಿಯರು ಕೈಬಿಟ್ಟಿದ್ದರು. ಸದ್ಯ ಈಗ ಬರುತ್ತಿರುವುದು ಅದೇ ಸಿನಿಮಾವೇ? ಹೌದು ಎನ್ನುತ್ತವೆ ಮೂಲಗಳು. 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಟೈಟಲ್ ಬದಲು 'ರಕ್ತ ಕಾಶ್ಮೀರ' ಎಂದು ಟೈಟಲ್ ಇಡಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಸಂಬಂಧ ರಾಜೇಂದ್ರ ಸಿಂಗ್ ಬಾಬು ಸ್ಪಷ್ಟನೆ ನೀಡಿದ್ದು, ರಕ್ತ ಕಾಶ್ಮೀರವು ನಾನು ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವ ಹೊಸ ಯೋಜನೆಯಾಗಿದೆ. ಇದು ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್‌ಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಮತ್ತು ಸಂಪೂರ್ಣವಾಗಿ ವಿಭಿನ್ನವಾದ ಥೀಮ್ ಹೊಂದಿದೆ. ಎಲ್ಲವೂ ಸರಿಯಾಗಿ ನಡೆದರೆ ಡಿಸೆಂಬರ್ 20ಕ್ಕೆ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಕುತೂಹಲಕಾರಿಯಾಗಿ, ಡಿಸೆಂಬರ್ 20 ರಂದು ಉಪೇಂದ್ರ ಅವರ ಬಹು ನಿರೀಕ್ಷಿತ UI ಬಿಡುಗಡೆಯಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ