
6 ವರ್ಷಗಳ ಬ್ರೇಕ್ ಬಳಿಕ ನಿರ್ದೇಶಕ ದಿನಕರ್ ತೂಗುದೀಪ ಅವರು ರಾಯಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ವಾಪಸ್ಸಾಗುತ್ತಿದ್ದು, ಚಿತ್ರವು 2025ರ ಜನವರಿ 24 ರಂದು ತೆರೆಗೆ ಬರಲು ಸಜ್ಜಾಗಿದೆ.
ಜಯಣ್ಣ ಫಿಲಂಸ್ (ಜಯಣ್ಣ ಮತ್ತು ಭೋಗೇಂದ್ರ) ರಾಯಲ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗೇ ಚಿತ್ರದ ಲಾ ಓ ಮೇರಿ ಲೈಲಾ' ಹಾಡು ವೈರಲ್ ಆಗಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ.
ಯೂತ್‌ಫುಲ್ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರ ಇದಾಗಿದ್ದು, ಭಾವನಾತ್ಮಕತೆ, ಹಾಸ್ಯ ಮತ್ತು ಆ್ಯಕ್ಷನ್‌ಗಳ ಮಿಶ್ರಣ ಹಾಗೂ ಸಂದೇಶವನ್ನು ಒಳಗೊಂಡಿದೆ.
ಚಿತ್ರದ ನಾಯಕನಾಗಿ ವಿರಾಟ್ ಅಭಿನಯಿಸಿದ್ದು, ವಿರಾಟ್'ಗೆ ಜೋಡಿಯಾಗಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಅಭಿಲಾಷ್, ಮತ್ತು ಗೌರವ್ ಶೆಟ್ಟಿ ಮುಂತಾದ ತಾರಾಬಳಗ ಚಿತ್ರಕ್ಕಿದೆ. ಚಿತ್ರದ ಛಾಯಾಗ್ರಹಣವನ್ನು ಸಂಕೇತ್ ಮೈಸೂರು ನಿರ್ವಹಿಸಿದ್ದಾರೆ.
ಕಿಸ್ ಚಿತ್ರದಲ್ಲಿ ನಟಿಸಿದ್ದ ವಿರಾಟ್ ಅವರಿಗೆ ರಾಯಲ್ ಎರಡನೇ ಚಿತ್ರವಾಗಿದೆ. ಇನ್ನು ತೆಲುಗು ಸಿನಿಮಾಗಳಲ್ಲಿ ಬಿಝಿಯಾಗಿದ್ದ ಸಂಜನಾ ಅವರು ವಿಂಡೋಸೀಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗಿದ್ದು, ರಾಯಲ್ ಚಿತ್ರದಲ್ಲಿ ನಟಿಸಿದ್ದಾರೆ.
Advertisement