
ದಾರಿ ಯಾವುದಯ್ಯಾ ವೈಕುಂಠಕ್ಕೆ, ಬ್ರಹ್ಮಕಮಲ, ತಾರಿಣಿ ಸೇರಿದಂತೆ ಒಂದಷ್ಟು ಭಿನ್ನ ಧಾಟಿಯ ಸಿನಿಮಾಗಳೊಂದಿಗೆ ಪ್ರತಿಭಾನ್ವಿತ ನಿರ್ದೇಶಕರೆಂದು ಗುರುತಿಸಿಕೊಂಡಿರುವ ಸಿದ್ದು ಪೂರ್ಣಚಂದ್ರ ಅವರು, `ಈ ಪಾದ ಪುಣ್ಯ ಪಾದ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಯಿತು.
ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರು ಚಿತ್ರದ ಪೋಸ್ಟರ್"ನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.
ಹೊಸಬರನ್ನು ಪ್ರೋತ್ಸಾಹಿಸುವುದು ಮತ್ತು ಅರ್ಥಪೂರ್ಣ ಸಂದೇಶಗಳೊಂದಿಗೆ ಚಲನಚಿತ್ರಗಳನ್ನು ಪ್ರಚಾರ ಮಾಡುವುದು ಅತ್ಯಗತ್ಯವಿದೆ. ಚಿತ್ರ ತಂಡಕ್ಕೆ ಅಭಿನಂದನೆಗಳು ಎಂದು ಶ್ರೀಮುರುಳಿ ಹೇಳಿದರು. ಇದೇ ವೇಳೆ ಚಿತ್ರದ ಉದ್ದೇಶ ಹಾಗೂ ಥೀಮ್ ಅನ್ನು ಶ್ಲಾಘಿಸಿದರು.
ಇದೊಂದು ಆನೆ ಕಾಲು ರೋಗಿಯ ಕಥೆಯಾಧಾರಿತ ಚಿತ್ರ. ಈ ಸಿನಿಮಾ ಪ್ರತಿಯೊಬ್ಬ ಪ್ರೇಕ್ಷಕನಿಗೂ ಹೊಸ ಆಯಾಮದಲ್ಲಿ ಪರಿಣಾಮ ಬೀರಬಹುದು. ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ರೀತಿಯ ಕಾಯಿಲೆಗಳು ಬರುತ್ತವೆ. ರೋಗ ಬಂದಾಗ ರೋಗಕ್ಕಿಂತ ಮಾನಸಿಕ ಯಾತನೆಯೇ ಜಾಸ್ತಿಯಾಗಿರುತ್ತದೆ. ಯಾವುದೇ ರೋಗ ಬಂದರೂ ಕೂಡ ನಾವು ಎದೆಗುಂದದೆ ತಾಳ್ಮೆಯಿಂದ ಎದುರಿಸಬೇಕು ಎನ್ನುವುದನ್ನು ಸಾರುವ ಚಿತ್ರವೇ ಈ ಪಾದ ಪುಣ್ಯಪಾದ. ಯಾವುದೇ ರೋಗ ಬಂದಿರುವ ವ್ಯಕ್ತಿಯನ್ನು ಯಾವ ರೀತಿ ಪ್ರೀತಿಯಿಂದ ನೋಡಿಕೊಳ್ಳಬೇಕು, ಸಾಂತ್ವನ ಹೇಳಬೇಕು ಎಂಬುದನ್ನು ಈ ಚಿತ್ರದ ಮುಖಾಂತರ ಸಮಾಜಕ್ಕೆ ಹೇಳಲಾಗಿದೆ ಎಂದು ನಿರ್ದೇಶಕರು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.
ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ರವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರದ ಮೂಲಕ ನೂರಾರು ಸಿನಿಮಾಗಳಿಗೆ ಪ್ರಚಾರಕರ್ತರಾಗಿ ಕಾರ್ಯ ನಿರ್ವಹಿಸಿರುವ ಆಟೋ ನಾಗರಾಜ್ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ರಶ್ಮಿ, ಚೈತ್ರ, ಪ್ರಮೀಳಾ ಸುಬ್ರಹ್ಮಣ್ಯ, ಮನೋಜ್, ಹರೀಶ್ ಕುಂದೂರು, ಬೇಬಿ ರಿದಿ, ಪವಿತ್ರ, ಬಾಲರಾಜ್ ವಾಡಿ, ರೋಹಿಣಿ, ಶಂಕರ್ ಭಟ್, ಪ್ರೀತಿ, ಮೀಸೆ ಮೂರ್ತಿ ಇನ್ನೂ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಅನಂತ ಆರ್ಯನ್ ಸಂಗೀತ ಮತ್ತು ಹಿನ್ನೆಲೆ ಸಂಗೀತ, ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ನಾಗರತ್ನ ಅವರ ವಸ್ತ್ರವಿನ್ಯಾಸ, ಶ್ರೀರಾಮ್ ಅವರ ಧ್ವನಿ ವಿನ್ಯಾಸವಿದ್ದು, ಸಿನಿಮಾಗೆ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ಸಿಕ್ಕಿದೆ. ಈ ಚಿತ್ರವು ಹಲವಾರು ಚಲನಚಿತ್ರೋತ್ಸವಗಳಲ್ಲಿ ಸ್ಪರ್ಧಿಸಲು ರೆಡಿಯಾಗಿದೆ.
Advertisement