ತರುಣ್ ಸುಧೀರ್ ನಿರ್ಮಾಣದ ಮುಂದಿನ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ನಿರ್ದೇಶನ
ಚೌಕ ಮತ್ತು ಕಾಟೇರದಂತಹ ಯಶಸ್ವಿ ಚಿತ್ರಗಳ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ತರುಣ್ ಸುಧೀರ್ ಕ್ರಿಯೇಟಿವೇಜ್ ಅಡಿಯಲ್ಲಿ ತಮ್ಮ ಎರಡನೇ ಚಿತ್ರದ ನಿರ್ಮಾಣಕ್ಕೆ ಸಜ್ಜಾಗುತ್ತಿದ್ದಾರೆ. ಗುರು ಶಿಷ್ಯರು ಚಿತ್ರದ ಯಶಸ್ಸಿನ ನಂತರ, ಅಟ್ಲಾಂಟಾ ನಾಗೇಂದ್ರ ಅವರೊಂದಿಗೆ ಸಹ ನಿರ್ಮಿಸುತ್ತಿರುವ ಮುಂಬರುವ ಚಿತ್ರವು ಲವ್ ಥ್ರಿಲ್ಲರ್ ಚಿತ್ರವಾಗಲಿದೆ.
ಇನ್ನೂ ಹೆಸರಿಡದ ಈ ಚಿತ್ರಕ್ಕೆ ಗೀತರಚನೆಕಾರ ಮತ್ತು ಕಥೆಗಾರ ಪುನೀತ್ ರಂಗಸ್ವಾಮಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಲಿದ್ದಾರೆ. ಅವರು ಈ ಹಿಂದೆ ತರುಣ್ ಸುಧೀರ್ ಜೊತೆ ಕಾಟೇರಾದಲ್ಲಿ ಜನಪ್ರಿಯ 'ರೈತ' ಹಾಡು ಮತ್ತು ಗುರು ಶಿಷ್ಯರಲ್ಲಿ 'ಆಣೆ ಮಾಡಿ ಹೇಳುತ್ತೇನೆ' ಹಾಡಿಗೆ ಸಾಹಿತ್ಯ ಬರೆದಿದ್ದರು.
ಪ್ರಾಜೆಕ್ಟ್ ಹೇಗೆ ಹುಟ್ಟಿಕೊಂಡಿತು ಎಂಬುದನ್ನು ತಿಳಿಸಿರುವ ತರುಣ್ ಸುಧೀರ್, “ಪುನೀತ್ ರಂಗಸ್ವಾಮಿ ಸ್ವಲ್ಪ ಸಮಯದಿಂದ ಕಥೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಅವರು ಕ್ರಿಯೇಟಿವ್ ಹೆಡ್ ಆಗಿ ನನ್ನ ಮಾರ್ಗದರ್ಶನವನ್ನು ಮಾತ್ರ ಕೇಳುತ್ತಿದ್ದರು. ಚಿತ್ರದ ನಿರೂಪಣೆ ಮತ್ತು ಅದರ ಮೂಲ ಸಾರ ನನ್ನ ಗಮನ ಸೆಳೆಯಿತು. ನಾನು ಚಿತ್ರ ನಿರ್ಮಿಸಲು ನಿರ್ಧರಿಸಿದೆ, ಅದಕ್ಕೆ ನ್ಯಾಯ ಸಲ್ಲಿಸಬಹುದು ಎಂಬ ನಂಬಿಕೆ ನನಗಿದೆ ಎಂದರು.
ಕರ್ನಾಟಕ-ತಮಿಳುನಾಡು ಗಡಿಯ ಚಾಮರಾಜನಗರ, ಸೇಲಂ ಮತ್ತು ಈರೋಡ್ ಭಾಗದ ಕಥೆಯಾಗಿದ್ದು, ಥ್ರಿಲ್ಲರ್ ಅಂಶದೊಂದಿಗೆ ತೀವ್ರವಾದ ಪ್ರೇಮಕಥೆಯಿದೆ.
ರಾಂಬೋ ಮತ್ತು ರಾಂಬೋ 2 ನಲ್ಲಿ ತರುಣ್ ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಿರುವ ಅಟ್ಲಾಂಟಾ ನಾಗೇಂದ್ರ ಅವರಿಗೆ ಕಥೆ ಇಷ್ಟವಾಗಿದೆ. ನಾಗೇಂದ್ರ ಅವರು ಬೆಂಗಳೂರಿಗೆ ಬಂದಿದ್ದಾಗ ಸ್ಕ್ರಿಪ್ಟ್ ಕೇಳಿದಾಗ ಕೂಡಲೇ ಅದರ ಭಾಗವಾಗಲು ಒಪ್ಪಿಕೊಂಡರು. ನಮಗೆಲ್ಲರಿಗೂ ಈ ಪ್ರಾಜೆಕ್ಟ್ ಇಷ್ಟವಾಗಿದೆ ಎಂದರು.
ಈ ತಿಂಗಳ ಅಂತ್ಯದ ವೇಳೆಗೆ ಚಿತ್ರೀಕರಣವನ್ನು ಪ್ರಾರಂಭಿಸುವ ಗುರಿಯನ್ನು ತಂಡವು ಹೊಂದಿದೆ. ಪ್ರಮುಖ ಪಾತ್ರಗಳಲ್ಲಿ ಹೊಸ ಮುಖಗಳನ್ನು ಪರಿಚಯಿಸಲು ಯೋಜಿಸಲಾಗಿದೆ. ಶೀಘ್ರದಲ್ಲೇ ಪಾತ್ರವರ್ಗದ ವಿವರಗಳನ್ನು ಪ್ರಕಟಿಸುತ್ತೇವೆ ಎಂದು ತಿಳಿಸಿದರು.
ನರಸಿಂಹ ನಾಯಕ್ (ರಾಜು ಗೌಡ) ಪ್ರಸ್ತುತಪಡಿಸುವ ಚಿತ್ರದ ತಾಂತ್ರಿಕ ತಂಡದಲ್ಲಿ ಸುಧಾಕರ್ ಎಸ್ ರಾಜ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ ಮತ್ತು ರಾಜಶೇಖರ್ ಕಲಾ ನಿರ್ದೇಶಕರಾಗಿರುತ್ತಾರೆ. ಸಂಗೀತ ನಿರ್ದೇಶಕರು ಇನ್ನಷ್ಟೇ ಅಂತಿಮವಾಗಬೇಕಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ