
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಶನಿವಾರ ಮುಕ್ತಾಯಗೊಂಡಿದ್ದು, ಅಧ್ಯಕ್ಷರಾಗಿ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಎಂ ಆಯ್ಕೆಗೊಂಡಿದ್ದಾರೆ. ಇವರು, ತಮ್ಮ ಪ್ರತಿಸ್ಪರ್ಧಿ ವಜ್ರೇಶ್ವರಿ ಚಿತ್ರಮಂದಿರದ ಮಾಲೀಕ ಸುಂದರ್ ರಾಜು ಆರ್ ಅವರನ್ನು ಮಣಿಸಿದರು. ಎಂ.ನರಸಿಂಹಲು ಆಯ್ಕೆಯಾಗುವ ಮೂಲಕ ಸಾ.ರಾ ಗೋವಿಂದು ಬಣಕ್ಕೆ ಮತ್ತೆ ಗೆಲುವು ಸಿಕ್ಕಂತಾಗಿದೆ.
ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ವಲಯಗಳಿಂದ ವಿವಿಧ ಸ್ಥಾನಗಳಿಗಾಗಿ ಒಟ್ಟು 104 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಸಲ ಪ್ರದರ್ಶಕ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು.ಈ ಬಾರಿ ಅಧ್ಯಕ್ಷ ಸ್ಥಾನ ಪ್ರದರ್ಶಕರ ವಲಯಕ್ಕೆ ಮೀಸಲಾಗಿತ್ತು. ಎಂ.ನರಸಿಂಹಲು ಅವರು ತಮ್ಮ ಪ್ರತಿಸ್ಪರ್ಧಿ ಆರ್.ಸುಂದರ್ ರಾಜು ಅವರನ್ನು ಸೋಲಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಉಪಾಧ್ಯಕ್ಷರಾಗಿ ನಿರ್ಮಾಪಕ ವಲಯದಿಂದ ಸಫೈರ್ ವೆಂಕಟೇಶ್, ಪ್ರದರ್ಶಕ ವಲಯದಿಂದ ರಂಗಪ್ಪ ಕೆ.ಓ, ವಿತರಕ ವಲಯದಿಂದ ಶಿಲ್ಪಾ ಶ್ರೀನಿವಾಸ್ ಆಯ್ಕೆಗೊಂಡರು. ಗೌರವ ಕಾರ್ಯದರ್ಶಿಯಾಗಿ ಪ್ರದರ್ಶಕ ವಲಯದಿಂದ ವೀರೇಶ್ ಚಿತ್ರಮಂದಿರದ ಮಾಲೀಕ ಕುಶಾಲ್ ಎಲ್.ಸಿ, ನಿರ್ಮಾಪಕ ವಲಯದಿಂದ ಪ್ರವೀಣ್ ಕುಮಾರ್, ವಿತರಕ ವಲಯದಿಂದ ಎಂ.ಎನ್.ಕುಮಾರ್ ಆಯ್ಕೆಗೊಂಡರು.
ಮಧ್ಯಾಹ್ನದಿಂದ ಚುನಾವಣೆ ನಡೆದಿದ್ದು, ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಇವಿಎಂ ಬಳಕೆ ಮಾಡಲಾಗಿದೆ. ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖವಾಗಿ ಸಾರಾ ಗೋವಿಂದು ಬಣ ಮತ್ತು ಭಾಮಾ ಹರೀಶ್ ಅವರ ಬಣಗಳ ಮಧ್ಯೆ ಜಿದ್ದಾಜಿದ್ದಿ ನಡೆದಿತ್ತು. ಅಂತಿಮವಾಗಿ ಸಾರಾ ಗೋವಿಂದು ಬಣಕ್ಕೆ ಜಯ ದೊರೆತಿದೆ.
Advertisement