
ನವದೆಹಲಿ: ಪುಷ್ಪ 2: ದಿ ರೂಲ್ ನಟಿ ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ ಎಂಟು ವರ್ಷಗಳನ್ನು ಪೂರೈಸಿದ್ದು, ನಿರಂತರ ಪ್ರೀತಿ ಮತ್ತು ಬೆಂಬಲಕ್ಕಾಗಿ ಅಭಿಮಾನಿಗಳಿಗೆ ಮಂಗಳವಾರ ಧನ್ಯವಾದಗಳನ್ನು ಹೇಳಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ 28 ವರ್ಷದ ನಟಿ ತನ್ನ ಅಭಿಮಾನಿಗಳಿಗೆ ಕೃತಜ್ಞತೆಯ ಸಂದೇಶವನ್ನು ಹಂಚಿಕೊಂಡಿದ್ದಾರೆ.
'ಚಿತ್ರರಂಗಕ್ಕೆ ಕಾಲಿಟ್ಟು 8 ವರ್ಷಗಳು ಪೂರೈಸಿವೆ ಮತ್ತು ನಾನು ಇಲ್ಲಿಯವರೆಗೆ ಏನನ್ನು ಮಾಡಿದ್ದೇನೋ ಅದನ್ನು ಮಾಡಲು ಏಕೈಕ ಕಾರಣವೆಂದರೆ ಅದು ನಿಮ್ಮ ಪ್ರೀತಿ ಮತ್ತು ಬೆಂಬಲ. ಧನ್ಯವಾದಗಳು' ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಹುಟ್ಟಿದ ರಶ್ಮಿಕಾ ಮಂದಣ್ಣ ಅವರು 2016 ರಲ್ಲಿ ಕನ್ನಡ ಚಲನಚಿತ್ರ ರಕ್ಷಿತ್ ಶೆಟ್ಟಿ ನಟನೆಯ 'ಕಿರಿಕ್ ಪಾರ್ಟಿ' ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ಅದಾದ ಬಳಿಕ ರಶ್ಮಿಕಾ ಹಿಂತಿರುಗಿ ನೋಡಲೇ ಇಲ್ಲ. ತೆಲುಗಿಗೆ ಪದಾರ್ಪಣೆ ಮಾಡಿದ ಅವರು, ವಿಜಯ ದೇವರಕೊಂಡ ಜೊತೆಗೆ 'ಗೀತಾ ಗೋವಿಂದಂ', 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ನಟಿಸಿ ಮತ್ತಷ್ಟು ಖ್ಯಾತಿ ಗಳಿಸಿದರು. ಬಳಿಕ ನಿತಿನ್ ನಟನೆಯ 'ಭೀಷ್ಮ' ಮತ್ತು ತೆಲುಗು ಹಿಟ್ ಚಿತ್ರಗಳಲ್ಲಿ ಒಂದಾದ 'ಸೀತಾ ರಾಮಂ'ನಲ್ಲಿ ನಟಿಸಿದರು.
2021ರ ಹಿಟ್ ಚಿತ್ರ 'ಪುಷ್ಪ: ದಿ ರೈಸ್' ನಲ್ಲಿ ನಟ ಜೊತೆಗೆ ಅಲ್ಲು ಅರ್ಜುನ್ ಜೊತೆಗೆ ನಟಿಸಿ ಶ್ರೀವಲ್ಲಿಯಾಗಿ ದೇಶದಾದ್ಯಂತ ಮನೆಮಾತಾದರು. ಇದರೊಂದಿಗೆ 'ಗುಡ್ ಬೈ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು ಮತ್ತು ನಂತರ ರಣಬೀರ್ ಕಪೂರ್ ಅವರೊಂದಿಗೆ 'ಅನಿಮಲ್' ಚಿತ್ರದಲ್ಲಿ ನಟಿಸಿದರು. ಈ ಚಿತ್ರವೂ ರಶ್ಮಿಕಾ ಅವರ ಹಿಟ್ ಚಿತ್ರಗಳ ಸಾಲಿಗೆ ಸೇರಿತು.
ನಟಿ ಇತ್ತೀಚೆಗೆ ಪುಷ್ಪ 2 ಚಿತ್ರದಲ್ಲಿ ನಟಿಸಿದ್ದಾರೆ. ಇದು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿದ್ದು, ಡಿಸೆಂಬರ್ 5 ರಂದು ಬಿಡುಗಡೆಯಾದಾಗಿನಿಂದ ಈವರೆಗೆ ಸುಮಾರು 1,700 ಕೋಟಿ ರೂ. ಗಳಿಕೆ ಕಂಡಿದೆ.
ರಶ್ಮಿಕಾ ಇದೀಗ ಸಲ್ಮಾನ್ ಖಾನ್ ಜೊತೆಗಿನ 'ಸಿಕಂದರ್', ವಿಕ್ಕಿ ಕೌಶಲ್ ಜೊತೆಗಿನ 'ಛಾವಾ' ಮತ್ತು ಆಯುಷ್ಮಾನ್ ಖುರಾನಾ ಅವರ 'ಥಾಮ' ಎಂಬ ಮುಂತಾದ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ 'ಕುಬೇರ' ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.
Advertisement