ತರುಣ್ ಕಿಶೋರ್ ಸುಧೀರ್ ನಿರ್ದೇಶನದ ದರ್ಶನ್ ಅವರ ಕಾಟೇರಾ ಡಿಸೆಂಬರ್ 29 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ 200 ಕೋಟಿಗೂ ಹೆಚ್ಚು ಗಳಿಸುವ ಮೂಲಕ ವಾಣಿಜ್ಯ ಬ್ಲಾಕ್‌ಬಸ್ಟರ್ ಎಂದು ಘೋಷಿಸಲಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ಆರನೇ ವಾರವೂ ಅದ್ಭುತ ಪ್ರದರ್ಶನ ಕಾಣುತ್ತಿದೆ. 196 ಚಿತ್ರಮಂದಿರ ಹಾಗೂ 63 ಮಲ್ಟಿಫ್ಲೆಕ್ಸ್ ಗಳಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಕಾಟೇರ ಈಗ ಒಟಿಟಿಗೆ ಬರಲು ದಿನಾಂಕ ನಿಗದಿಯಾಗಿದೆ.
ರಾಬರ್ಟ್ ಸಿನಿಮಾ ಬಳಿಕ ತರುಣ್ ಸುಧೀರ್ ಮತ್ತು ದರ್ಶನ್ ಕಾಟೇರ ಸಿನಿಮಾ ಮೂಲಕ ಕೈ ಜೋಡಿಸಿ ಯಶ ಕಂಡಿದ್ದಾರೆ. ಬಂಡವಾಳ ಹೂಡಿದ ರಾಕ್‌ಲೈನ್ ವೆಂಕಟೇಶ್ ಈ ಸಿನಿಮಾದಿಂದ ಜೇಬು ತುಂಬಿಸಿಕೊಂಡಿದ್ದಾರೆ.
ದರ್ಶನ್ ಸಿನಿಕರಿಯರ್ ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ್ದ ಕಾಟೇರ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಪ್ಯಾನ್ ಇಂಡಿಯಾ ಚಿತ್ರಗಳ ಅಬ್ಬರದ ನಡುವೆಯೂ ನಮ್ಮ ನೆಲದ ಕಥೆಗೆ ಪ್ರೇಕ್ಷಕ ಜೈಕಾರ ಹಾಕಿದ್ದರು. ರಾಕ್ ಲೈನ್ ವೆಂಕಟೇಶ್ ನಿರ್ಮಿಸಿರುವ ಈ ಸಿನಿಮಾ ಈಗಾಗಲೇ Zee5 ಜೊತೆ ವ್ಯಾಪಾರ ವಹಿವಾಟು ಮುಗಿಸಿದೆ. ನಿರ್ಮಾಪಕರು ಹಾಗೂ ಓಟಿಟಿ ವೇದಿಕೆ ಜೊತೆ ಮಾಡಿಕೊಂಡ ಒಡಂಬಡಿಕೆಯಂತೆ ‘ಕಾಟೇರ’ ಮುಂದಿನ ವಾರ ಪ್ರೀಮಿಯರ್ ಆಗುತ್ತಿದೆ.
ಜೀ 5 ಒಟಿಟಿಯಲ್ಲಿ ಕಾಟೇರ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಫೆ. 9ರಂದು ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಒಮ್ಮೆ ಒಟಿಟಿಗೆ ಬಂದ ಬಳಿಕ ಆ ಸಿನಿಮಾವನ್ನು ಡಬ್ ಮಾಡಿ ಮಗದೊಮ್ಮೆ ಚಿತ್ರಮಂದಿರದಲ್ಲಿ ರಿಲೀಸ್ ಮಾಡುವುದು ವ್ಯವಹಾರದ ದೃಷ್ಟಿಯಿಂದಲೂ ನಷ್ಟವೇ! ಆದರೆ, ಒಟಿಟಿಯಲ್ಲಿಯೇ ಕನ್ನಡದ ಜತೆಗೆ ಬೇರೆ ಬೇರೆ ಭಾಷೆಗಳಿಗೆ ಈ ಸಿನಿಮಾ ಡಬ್ ಆಗಿ ಸ್ಟ್ರೀಮ್ ಆಗುವ ಸಾಧ್ಯತೆಗಳೂ ದಟ್ಟವಾಗಿವೆ.
Zee5 ತಾನು ಖರೀದಿಸಿದ ಹೊಸ ಸಿನಿಮಾಗಳನ್ನು ಪ್ರತಿ ಶುಕ್ರವಾರ ಬಿಡುಗಡೆ ಮಾಡುತ್ತೆ. ಅಲ್ಲದೆ ನಿರ್ಮಾಪಕರು ಹಾಗೂ ಓಟಿಟಿ ಸಂಸ್ಥೆಯೊಂದಿಗೆ ಸಿನಿಮಾ ಬಿಡುಗಡೆಯಾದ 30 ರಿಂದ 40 ದಿನಗಳ ಅಂತರದಲ್ಲಿ ಓಟಿಟಿಯಲ್ಲಿ ಪ್ರೀಮಿಯರ್ ಮಾಡುವ ಬಗ್ಗೆ ಸಹಜವಾಗಿ ಒಪ್ಪಂದ ಆಗುತ್ತೆ. ‘ಕಾಟೇರ’ ಬಿಡುಗಡೆಯಾದ 40 ದಿನಗಳ ಬಳಿಕ ಓಟಿಟಿಯಲ್ಲಿ ರಿಲೀಸ್ ಮಾಡುವ ಮಾತುಕತೆ ನಡೆದಿದ್ದು, ಅದರಂತೆಯೇ ಫೆಬ್ರವರಿ 9ರಂದು ಸಿನಿಮಾ ಪ್ರೀಮಿಯರ್ ಆಗಲಿದೆ.
ಕಾಟೇರ ಸಿನಿಮಾ ಕನ್ನಡದ ನೆಲದ ಸಿನಿಮಾ. 1970ರ ಕಾಲಘಟ್ಟದ ಕಥೆಯನ್ನು ಚೆಂದವಾಗಿ ತೆರೆಮೇಲೆ ತಂದಿದ್ದರು ನಿರ್ದೇಶಕ ತರುಣ್ ಸುಧೀರ್. ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ದರ್ಶನ್ ಗೆ ನಾಯಕಿಯಾಗಿ ನಟಿಸಿದ್ದಾರೆ. ಕಥೆ ಬರೆದ ಜಡೇಶ್ ಕುಮಾರ್ ಹಂಪಿ, ಡೈಲಾಗ್ ಬರೆದ ಮಾಸ್ತಿಗೂ ಕಾಟೇರ ಸಿನಿಮಾ ಮರೆಯಲಾಗದ ಯಶಸ್ಸು ನೀಡಿದೆ.
Advertisement