'ನನ್ನಷ್ಟು ವಿವಾದ ಯಾರಿಗೂ ಸುತ್ತಿಕೊಳ್ಳಲ್ಲ, ಹೌದು ನಾನು ಬ್ಯಾಡ್ ಬಾಯ್, ನಂಗೆ ನನ್ನ ಕೆಲಸ ಮುಖ್ಯ': ನಟ ದರ್ಶನ್

ನಾನು ರೇಸಿನ ಕುದುರೆ ವಿವಾದಗಳಿಗೆ ಡೋಂಟ್ ಕೇರ್
ನಟ ದರ್ಶನ್
ನಟ ದರ್ಶನ್

ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳಾದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಸಂದರ್ಭವನ್ನು ಸ್ಮರಣೀಯವಾಗಿಸಲು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥ್ ಸ್ವಾಮಿ ದೇವಾಲಯದ ಆವರಣದಲ್ಲಿ ಬೆಳ್ಳಿಪರ್ವ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಗಳು, ಆದಿಚುಂಚನಗಿರಿ ಶ್ರೀ, ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಸೇರಿದಂತೆ ಚಿತ್ರರಂಗ, ರಾಜಕೀಯ ಕ್ಷೇತ್ರದ ಗಣ್ಯರು, ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ತಮ್ಮ ಸುದೀರ್ಘ ಪಯಣದ ಕ್ಷಣಗಳನ್ನು ದರ್ಶನ್ ಮೆಲುಕು ಹಾಕಿದರು. ಇಷ್ಟು ವರ್ಷಗಳಲ್ಲಿ ಸಾಕಷ್ಟು ಏರಿಳಿತ ಕಂಡು, ಇದೀಗ ಬಾಕ್ಸ್‌ ಆಫೀಸ್‌ ಸುಲ್ತಾನನಾಗಿ, ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿ ಬಹು ಎತ್ತರಕ್ಕೆ ಏರಿದ್ದಾರೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಅಭಿನಂದನಾ ಕಾರ್ಯಕ್ರಮದಲ್ಲಿ ದರ್ಶನ್‌ ಹಳೆಯ ದಿನಗಳನ್ನು ನೆನೆಸಿಕೊಂಡರು. ತಮ್ಮನ್ನು ತಾವು ಟಾಂಗಾ ಕುದುರೆ ಎಂದು ಸಂಬೋಧಿಸಿ ಕಥೆಯೊಂದನ್ನು ಹೇಳಿದರು.

ನಟ ದರ್ಶನ್
ಐತಿಹಾಸಿಕ ಚಿತ್ರ 'ಸಿಂಧೂರ ಲಕ್ಷ್ಮಣ'ಗಾಗಿ ಮತ್ತೆ ಒಂದಾದ ದರ್ಶನ್ - ತರುಣ್ ಸುಧೀರ್

"ಯಾವುದೋ ಟಾಂಗಾಗೆ ಕಟ್ಟಿದ ಕುದುರೆ, ಟಕು ಟಕು ಟಕು ಅಂತ ಹೋಗ್ತಾಯಿತ್ತು. ಆ ಕುದುರೆಯನ್ನ ಯಾರೋ ನೋಡಿದ್ರು. ಓಹ್‌ ಪರವಾಗಿಲ್ಲ, ಹೈಟ್‌ ಇದೆ. ಇದ್ಯಾಕೆ ಇಲ್ಲಿ ಓಡ್ತಿದೆ? ಅಂತ ಒಬ್ಬರು ಆ ಕುದುರೆಯನ್ನು ನೋಡಿದ್ರು. ಅವರಿಗೆ ಪಾಪ ರೇಸ್‌ಕೋರ್ಸ್‌ನ ಗಂಧ ಗಾಳಿಯೂ ಗೊತ್ತಿಲ್ಲ. ತಗೊಂಡು ಹೋಗೋಣ ಅಂತ ಹೇಳಿ ರೇಸ್‌ಕೋರ್ಸ್‌ನಲ್ಲಿ ನಿಲ್ಲಿಸಿಬಿಟ್ರು. ಆಗ ತುಂಬ ದೊಡ್ಡ ದೊಡ್ಡ ಕುದುರೆಗಳೆಲ್ಲ ಓಡ್ತಿದ್ವು. ಗೇಟಿಗೆ ಹಾಕಿದ್ರು. ಆ ಕುದುರೆ ಮಾಲೀಕರು ಬಂದು ನಿರ್ಮಾಪಕ ರಾಮಮೂರ್ತಿ ಅವ್ರು. ಆ ಕುದುರೆಗೆ ಹೇಳೋಕಾಗಲಿ, ಬೈಯೋಕಾಗಲಿ, ಅರ್ಹತೆ, ಯೋಗ್ಯತೆ, ಅಧಿಕಾರ ಇರೋದು ಅವರೊಬ್ಬರಿಗೆ ಎಂ ಜಿ ರಾಮಮೂರ್ತಿ ಅವರಿಗೆ ಮಾತ್ರ" ಎಂದರು.‌

ಅಲ್ಲಿಂದ ಈಗಲೂ ಆ ಕುದುರೆ ಓಡ್ತಾನೆ ಇದೆ..

"ಆ ಕುದುರೆ ಮೇಲೆ ಪಿ.ಎನ್‌ ಸತ್ಯ ಅನ್ನೋ ನಿರ್ದೇಶಕ ಜಾಕಿಯನ್ನು ಕೂರಿಸಿಬಿಟ್ಟು, ಓಡಿಸಿ ಎಂದರು. ಆವತ್ತು ನಮ್ಮ ರಾಮಮೂರ್ತಿ ಅವರು ಬಿಟ್ಟಂಥ ಈ ಕುದುರೆ, ಕುಂಟ್ತಾಯಿತ್ತೋ, ಓಡ್ತಾಯಿತ್ತೋ ಗೊತ್ತಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಓಡ್ತಾಯಿದೆ. ಇನ್ನು ಮುಂದೆಯೂ ಓಡಲಿದೆ. ಕೆಲಸ ಅಂತ ಬಂದಾಗ ಆ ಕುದುರೆ ಓಡ್ತಾನೇ ಇರುತ್ತೆ. ಆದರೆ, ಅದು ಆ ಕುದುರೆಗೆ ಗೊತ್ತಿರಲ್ಲ. ಆ ಕುದುರೆ ಮೇಲೆ ಯಾರೆಲ್ಲ ಕೂರುತ್ತಾರೋ ಆ ಜಾಕಿಗಳಿಗೆ ಗೊತ್ತಿರುತ್ತೆ" ಎಂದರು.


ನಿರ್ದೇಶಕರೇ ನನ್ನ ಜಾಕಿಗಳು, ಅವರು ಓಡಿಸಿದಂತೆ ಓಡ್ತಿದ್ದೇನೆ

ಜಾಕಿಗಳು ಎಂದರೆ ನಮ್ಮ ನಿರ್ದೇಶಕರುಗಳು. ಇಂದಿಗೂ ನಾನು ನನ್ನ ಮೊದಲ ನಿರ್ದೇಶಕರನ್ನು ನೆನಪಿಸಿಕೊಳ್ಳಲೇಬೇಕು. ನಮ್ಮ ಪಿ.ಎನ್‌ ಸತ್ಯ ಅವರಿಂದ ಹಿಡಿದು ಈಗಿನ ತರುಣ ಹಾಗೆ ನಮ್ಮ ಮಿಲನಾ ಪ್ರಕಾಶ್‌, ಅವರೆಲ್ಲೂ ನನ್ನ ಬೆನ್ನ ಮೇಲೆ ಕೂತ ಜಾಕಿಗಳು. ನಾನು ಮಾಡುವ ಸಿನಿಮಾ ಖಂಡಿತ ನಂದಲ್ಲ. ಅದು ನಿರ್ದೇಶಕರದ್ದು. ನಾನು ಕುದುರೆ ಮಾತ್ರ. ಕುದುರೆಗೆ ಯಾವಾಗ ಹೇಗೆ ನೋಡಿಕೊಳ್ಳಬೇಕು, ಯಾವಾಗ ಹೊಡಿಬೇಕು ಅದು ಆ ನಿರ್ದೇಶಕ ಅನ್ನೋ ಜಾಕಿಗಷ್ಟೇ ಗೊತ್ತಿರುತ್ತದೆ. ಅಲ್ಲಿಂದ ಇಲ್ಲಿಯವರೆಗೂ ನಾನು ಓಡಿಕೊಂಡೇ ಬಂದಿದ್ದೇನೆ. ಮುಂದೆಯೂ ನಾನು ರೇಸ್‌ನಲ್ಲಿರಲಿದ್ದೇನೆ ಎಂದರು ದರ್ಶನ್.

ವಿವಾದ: ಇನ್ನು ತಮ್ಮ ಮಾತಿನ ಮಧ್ಯೆ ತಮ್ಮ ವಿರುದ್ಧ ಆಗಾಗ ಸುತ್ತಿಕೊಳ್ಳುವ ವಿವಾದ, ಖಾಸಗಿ ಬದುಕಿನ ಸಂಗತಿಗಳ ಬಗ್ಗೆಯೂ ದರ್ಶನ್ ಪರೋಕ್ಷವಾಗಿ ಮಾತನಾಡಿದ್ದಾರೆ. ‘ಚಿತ್ರರಂಗ, ರಾಜಕೀಯ, ಬ್ಯುಸಿನೆಸ್ ಯಾವುದೇ ಆಗಿರಲಿ ಶ್ರಮ ಇರಲೇಬೇಕು. ಶ್ರದ್ಧೆ ಬೇಕೇಬೇಕು. ಆರಂಭದಲ್ಲಿ ಅವಮಾನಗಳನ್ನು ಎದುರಿಸಲೇ ಬೇಕು. ಅವಮಾನಗಳು ಆದರೇನೆ ಸನ್ಮಾನ. ಚಪ್ಪಲಿಯಲ್ಲಿ ಹೊಡೆದರೆ ಹೊಡೀರಿ, ಹಾರ ಹಾಕಿಸಿಕೊಳ್ಳುವುದಕ್ಕೆ ಮಾತ್ರ ರೆಡಿ ಇದ್ದರೆ ಸಾಲದು, ಚಪ್ಪಲಿ ಬಿದ್ದಾಗ ಅದನ್ನೂ ಸ್ವೀಕರಿಸಬೇಕು. ನನ್ನಷ್ಟು ವಿವಾದ ಯಾರಿಗೂ ಸುತ್ತಿಕೊಳ್ಳಲ್ಲ. ಹೌದು ನಾನು ಬ್ಯಾಡ್ ಬಾಯ್. ಕಷ್ಟಪಟ್ಟಾಗ ಮಾತುಗಳು ಕಹಿಯಾಗಿರುತ್ತೆ. ಅದು ಕೆಲವರಿಗೆ ಹಿಡಿಸಲ್ಲ. ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಬದಿಗಿಡುತ್ತೀನಿ. ನನ್ನ ಸೆಲೆಬ್ರಿಟಿಗಳು, ನನ್ನ ಕೆಲಸ ಮುಖ್ಯ, ಬೇರೆಯದಕ್ಕೆ ತಲೆಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ನಾನ್ಯಾಕೆ ಇವರ ಬಗ್ಗೆ ತಲೆಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ’ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com