ತಮ್ಮ ವಿಭಿನ್ನ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತ ಚಿತ್ರರಂಗದಲ್ಲೇ ವಿಭಿನ್ನ ನಿರ್ದೇಶಕ ಎನಿಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ಈಗ ತಮ್ಮ ಹೊಸ ಸಿನಿಮಾದೊಂದಿಗೆ ಬರುತ್ತಿದ್ದಾರೆ.
ಸಿನಿಮಾ ಮಾತ್ರವಲ್ಲದೆ ತಮ್ಮ ಚಿತ್ರದ ಶೀರ್ಷಿಕೆಯನ್ನು ಕೂಡ ವಿಭಿನ್ನವಾಗಿಟ್ಟು ಗಮನ ಸೆಳೆಯುವುದು ಉಪೇಂದ್ರರ ಸ್ಟೈಲ್. ಈ ಬಾರಿ ಕೂಡ ಯುಐ (UI) ಎನ್ನುವ ವಿಭಿನ್ನ ಟೈಟಲ್ ಮೂಲಕ ತೆರೆ ಮೇಲೆ ಬರಲಿದ್ದಾರೆ.
ಇದೇ ತಿಂಗಳು ಯುಐ ಸಿನಿಮಾ ಟೀಸರ್ ಬಿಡುಗಡೆಯಾಗಲಿದ್ದು, ಆದರೆ ದಿನಾಂಕವನ್ನು ಅಭಿಮಾನಿಗಳೇ ಕಂಡು ಹಿಡಿಯುವಂತೆ ಸಿನಿಮಾ ತಂಡ ಸವಾಲು ಹಾಕಿದೆ. ಸಿನಿಮಾ ಅಪ್‌ಡೇಟ್ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ್ದು, ದಿನಾಂಕವನ್ನು ಡಿಕೋಡ್ ಮಾಡಿ ಎಂದು ಚಿತ್ರರಸಿಕರ ತಲೆಗೆ ಹುಳ ಬಿಟ್ಟಿದ್ದಾರೆ ಉಪೇಂದ್ರ.
ಇದಕ್ಕೂ ಮುನ್ನ ಯುಐ ಸಿನಿಮಾ ಟೀಸರ್ ಬಿಡುಗಡೆ ಮಾಡಿದ್ದ ಉಪೇಂದ್ರ ಸಂಚಲನ ಸೃಷ್ಟಿಸಿದ್ದರು. ಬರಿ ಕಪ್ಪು ಪರದೆ ತೋರಿಸಿ ಆಡಿಯೋ ಪ್ಲೇ ಮಾಡುವ ಮೂಲಕ ವಿಭಿನ್ನ ಟೀಸರ್ ಬಿಡುಗಡೆ ಮಾಡಿದ್ದರು. ಈಗ ಮತ್ಯಾವ ರೀತಿಯ ಟೀಸರ್ ಬಿಡುಗಡೆ ಮಾಡುತ್ತಾರೆ ಎನ್ನುವ ಕುತೂಹಲ ಇದೆ.
ತಿಂಗಳು ಮತ್ತು ಇಸವಿಯನ್ನು ಮಾತ್ರ ಕೊಟ್ಟಿದ್ದು ದಿನಾಂಕದ ಬದಲಾಗಿ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿರುವ ಚಿತ್ರತಂಡ, ಟೀಸರ್ ಬಿಡುಗಡೆ ದಿನಾಂಕವನ್ನು ಕಂಡು ಹಿಡಿಯುವಂತೆ ಕೇಳಿದ್ದಾರೆ. ವಿಡಿಯೋವನ್ನು ಮತ್ತೊಮ್ಮೆ ನೋಡಿ, ದಿನಾಂಕವನ್ನು ಕಂಡು ಹಿಡಿಯಿರಿ. ನಮಗೆ ಇ-ಮೇಲ್ ಮಾಡುವ ಮೂಲಕ, ಕಾರ್ಯಕ್ರಮದಲ್ಲಿ ಭಾಗವಹಿಸಲು ಪಾಸ್ ಗೆಲ್ಲಿ ಎಂದು ಹೇಳಿದೆ.
ಹಾಲಿವುಡ್‌ನಲ್ಲಿ ಬಳಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಉಪೇಂದ್ರ ತಮ್ಮ ಹೊಸ ಚಿತ್ರಕ್ಕಾಗಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಇದು ಭಾರತ ಚಿತ್ರರಂಗದಲ್ಲೇ ವೀಕ್ಷಕರಿಗೆ ಹೊಸ ಅನುಭವ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಕೂಡ ಸಿನಿಮಾ ಬಿಡುಗಡೆಯಾಗಲಿದೆ. ಜಿ. ಮನೋಹರನ್ ಮತ್ತು ಕೆ.ಪಿ. ಶ್ರೀಕಾಂತ್ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಇದೇ ವರ್ಷ ಬೇಸಿಗೆಯಲ್ಲಿ ಯುಐ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.
Advertisement