ಹುಟ್ಟುಹಬ್ಬ ಅಂದರೆ ಅಸಹ್ಯಪಡುವಂತಾಗಿದೆ: ನಟ ಯಶ್

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟುವಾಗ ಕರೆಂಟ್ ಶಾಕ್ ಹೊಡೆದು ಮೂವರು ಮೃತಪಟ್ಟಿದ್ದು ಈ ಹಿನ್ನೆಲೆಯಲ್ಲಿ ಗದಗ ಸೂರಣಗಿ ಗ್ರಾಮಕ್ಕೆ ತೆರಳಿದ ಯಶ್ ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದರು.
ನಟ ಯಶ್
ನಟ ಯಶ್

ಗದಗ: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟುವಾಗ ಕರೆಂಟ್ ಶಾಕ್ ಹೊಡೆದು ಮೂವರು ಮೃತಪಟ್ಟಿದ್ದು ಈ ಹಿನ್ನೆಲೆಯಲ್ಲಿ ಗದಗ ಸೂರಣಗಿ ಗ್ರಾಮಕ್ಕೆ ತೆರಳಿದ ಯಶ್ ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದರು.

ನನ್ನ ಹುಟ್ಟುಹಬ್ಬದ ದಿನ ಕಟೌಟ್​​​​​ ಕಟ್ಟುವಾಗ ಮೂವರು ಅಭಿಮಾನಿಗಳು ನಿಧನರಾದ ಘಟನೆ ತೀವ್ರ ನೋವುಂಟು ಮಾಡಿದೆ. ಬ್ಯಾನರ್ ಹಾಕೋದು ಕಟೌಟ್ ಕಟ್ಟೊದು ಬೇಡ. ಇನ್ನುಂದೆ ಈ ರೀತಿ ಮಾಡಬೇಡಿ ಎಂದು ಅಭಿಮಾನಿಗಳಿಗೆ ಯಶ್ ಕಿವಿಮಾತು ಹೇಳಿದ್ದಾರೆ. 

ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಯಶ್, ನನ್ನ ಹುಟ್ಟುಹಬ್ಬ ಯಾಕೆ ಬರುತ್ತೋ ಅಂತ ಭಯವಾಗುತ್ತಿದೆ. ಯಾರೂ ಈ ರೀತಿ ಮಾಡಬೇಡಿ. ಬರ್ತಡೇ ಮಾಡಬೇಡಿ ಎಂದು ಹೇಳಿದರೆ, ಬೇಸರ ಮಾಡಿಕೊಳ್ಳುತ್ತಾರೆ. ನೀವು ಬ್ಯಾನರ್, ಕಟೌಟ್ ಹಾಕುವುದನ್ನು ನಾನು ಇಷ್ಟಪಡುವುದಿಲ್ಲ. ನನ್ನ ಮೇಲೆ ಪ್ರೀತಿ ಇದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದು ಹೇಳಿದ್ದು, ಮನೆ ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಸ್ಥರಿಗೆ ಏನು ನೆರವು ಬೇಕೋ ಅದನ್ನು ಮಾಡುತ್ತೇನೆ ಎಂದು ಹೇಳಿದರು.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಕಳೆದ ರಾತ್ರಿ ಕಟೌಟ್ ಕಟ್ಟುವಾಗ ವಿದ್ಯುತ್​ ಶಾಕ್​ನಿಂದ ಅಭಿಮಾನಿಗಳಾದ ಹನುಮಂತ ಹರಿಜನ (21), ಮುರಳಿ ನಡವಿನಮನಿ (20) ಮತ್ತು ನವೀನ್ (19) ಮೃತಪಟ್ಟಿದ್ದು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. 

ಸೂರಣಗಿ ಗ್ರಾಮಕ್ಕೆ ಜನಸಾಗರ ಹರಿದು ಬಂದಿದೆ. ಯಶ್​ ಅವರ ಆಗಮನದ ಹಿನ್ನೆಲೆಯಲ್ಲಿ‌ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಅಕ್ಕಪಕ್ಕದ ಗ್ರಾಮಸ್ಥರು ಯಶ್ ಅವರನ್ನು ನೋಡಲು ಆಗಮಿಸಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಹಾಸಪಟ್ಟಿದ್ದಾರೆ.

2019ರಲ್ಲೂ ಅಭಿಮಾನಿಯೊಬ್ಬ ಪ್ರಾಣ ಕಳೆದುಕೊಂಡಿದ್ದ
ರಾಕಿಂಗ್​ ಸ್ಟಾರ್​ ಯಶ್ ಅವರು 2019ರಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವಾಗಲೂ ಒಬ್ಬ ಅಭಿಮಾನಿ ಪ್ರಾಣ ಕಳೆದುಕೊಂಡಿದ್ದ. ಯಶ್​ ಅವರನ್ನು ನೋಡಲು ಬಿಡದ ಕಾರಣ ಪೆಟ್ರೋಲ್ ಸುರಿದುಕೊಂಡು ರವಿ ಎಂಬ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದ. ಹೊಸಕೆರೆಹಳ್ಳಿಯ ಯಶ್​ ಅವರ ನಿವಾಸದ ಬಳಿ ಈ ಘಟನೆ ನಡೆದಿತ್ತು. ಆತನನ್ನ ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮರುದಿನ ಆತ ಮೃತಪಟ್ಟಿದ್ದನು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com