
ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನ ವಿಷ್ಣು-ಅಂಬಿ ಎಂದೇ ಗೆಳೆತನಕ್ಕೆ ಹೆಸರಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ದೂರಾಗಿ ಐದಾರು ವರ್ಷ ಕಳೆದಿದ್ದು, ಅವರಿಬ್ಬರೂ ಒಂದಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಂಸದೆ ಸುಮಲತಾ ಅವರ ಹುಟ್ಟುಹಬ್ಬದಂದು ಇವರಿಬ್ಬರು ಒಂದೇ ವೇದಿಕೆಯಲ್ಲಿದ್ದರು. ಇಲ್ಲಿ ಇವರಿಬ್ಬರು ಮಾತನಾಡಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ, ಅದು ಈಡೇರಲಿಲ್ಲ. ಈ ಕುರಿತು ಪ್ರಶ್ನೆಗೆ ಉತ್ತರಿಸಿದ್ದ ಸುದೀಪ್, ನಾವಿಬ್ಬರು ಕಿತ್ತಾಡಿಕೊಂಡು ಜಗಳ ಮಾಡಿದ್ದೇವೆ ಎನ್ನುವುದು ಕಲ್ಪನೆಯಾಗಿದೆ. ಇಬ್ಬರ ನಡುವಿನ ಗೋಡೆ ಮುರಿಯಬೇಕು, ನಾವಿಬ್ಬರೂ ಮೆಚ್ಯೂರ್ಡ್. ಎಲ್ಲವೂ ಸರಿ ಹೋಗಬೇಕು ಎಂದಾಗ ಸರಿ ಹೋಗುತ್ತದೆ" ಎಂದು ಹೇಳಿದ್ದರು.
ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ಬಿಡುಗಡೆಯಾದ ಮೂರನೇ ವಾರವೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಉತ್ತಮ ಕಲೆಕ್ಷನ್ ಜೊತೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಿನಿಮಾ ಯಶಸ್ವಿಯಾದ ಬಳಿಕ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ "ಸೆಲೆಬ್ರಿಟಿ ಶೋ" ಆಯೋಜಿಸಿದ್ದರು. ಕಾಟೇರ ವೀಕ್ಷಣೆಗೆ ಕಿಚ್ಚ ಸುದೀಪ್‌ಗೂ ಆಮಂತ್ರಣ ನೀಡಲಾಗಿತ್ತು. ಆದರೆ, ಮ್ಯಾಕ್ಸ್ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಕಾರಣ ಸೆಲೆಬ್ರಿಟಿ ಶೋಗೆ ಬರಲಾಗುತ್ತಿಲ್ಲ, ಆದರೆ, ಶೂಟಿಂಗ್ ಮುಗಿದ ಬಳಿಕ ನೋಡುತ್ತೇನೆ ಎಂದು ಸುದೀಪ್ ಹೇಳಿದ್ದರು ಎಂದು ತರುಣ್ ಕಿಶೋರ್ ಸುಧೀರ್ ಮಾಹಿತಿ ನೀಡಿದ್ದರು.
ಈ ಮಧ್ಯೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀಪ್ ಮಾಡಿರುವ ಟ್ವೀಟ್ ವೊಂದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಸುದೀಪ್ ಅವರಿಗೆ ಮ್ಯಾಡ್ ಮ್ಯಾಕ್ಸ್ ಎಂಬ ಹ್ಯಾಂಡಲ್‌ನಿಂದ "ಕಾಟೇರ ಯಾವಾಗ ನೋಡ್ತೀರ ಸರ್" ಎಂದು ಬಳಕೆದಾರರೊಬ್ಬರು ಪ್ರಶ್ನೆ ಕೇಳಿದ್ದರು.
ಈ ಪ್ರಶ್ನೆಗೆ 'ನಾನು ಈಗಾಗಲೇ ನೋಡಿಲ್ಲ ಎಂದು ನಿಮಗೆ ಯಾರೂ ಹೇಳಿಲ್ವ?" ಎಂದು ಸುದೀಪ್ ಉತ್ತರ ನೀಡಿದ್ದಾರೆ. ಈ ಉತ್ತರ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ನಾನು ಈಗಾಗಲೇ ನೋಡಿಲ್ಲ ಎಂದು ಮಗೆ ಯಾರೂ ಹೇಳಿಲ್ವ ಎಂದು ಪ್ರಶ್ನಿಸುವ ಮೂಲಕ ಕಿಚ್ಚ ಸುದೀಪ್ ಈಗಾಗಲೇ ಈ ಸಿನಿಮಾ ನೋಡಿರಬಹುದು ಎಂದು ಕೆಲ ಅಭಿಮಾನಿಗಳು ಅಂದುಕೊಂಡರೆ, ಮತ್ತೆ ಕೆಲವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ ಎನ್ನುತ್ತಿದ್ದಾರೆ. ಒಟ್ಟಾರೆ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.
Advertisement