ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವೀಡಿಯೋ: ಆರೋಪಿ ಬಂಧನ!

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸ್ ತಂಡವು ಆಂಧ್ರಪ್ರದೇಶದಿಂದ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. 

ಆರೋಪಿಯನ್ನು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಿವಾಸಿ ಈಮನಿ ನವೀನ್ (24) ಎಂದು ಗುರುತಿಸಲಾಗಿದೆ. ಈತ ಸೋಶಿಯಲ್ ಮೀಡಿಯಾಗಳ ಮೂಲಕ ಡೀಪ್‌ಫೇಕ್ ವೀಡಿಯೊ ಅಪ್‌ಲೋಡ್ ಮಾಡುವುದು ಮತ್ತು ವೈರಲ್ ಮಾಡುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲಾಗಿತ್ತು ಎಂದು ಐಎಫ್‌ಎಸ್‌ಒ ಉಪ ಪೊಲೀಸ್ ಆಯುಕ್ತ ಹೇಮಂತ್ ತಿವಾರಿ ಹೇಳಿದ್ದಾರೆ.

ನಂತರ ಕೈಗೊಂಡ ತನಿಖೆಯಲ್ಲಿ ಇದು ಅಕ್ಟೋಬರ್ 2023ರಲ್ಲಿ ಬ್ರಿಟಿಷ್ ಇಂಡಿಯನ್ ಯುವತಿಯೊಬ್ಬಳು ಅಪ್ ಲೋಡ್ ಮಾಡಿದ ವಿಡಿಯೋ ಎಂಬುದು ಕಂಡುಬಂದಿತ್ತು.  ನಂತರ 500 ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳನ್ನು ವಿಶ್ಲೇಷಿಸಲಾಯಿತು. ಹಲವಾರು ಸಾಮಾಜಿಕ ಮಾಧ್ಯಮ ಖಾತೆದಾರರನ್ನು ವಿಚಾರಣೆಗೆ ಒಳಪಡಿಸಿದ್ದು, ಶಂಕಿತರ ಬಗ್ಗೆ ಆಳವಾದ ವಿಚಾರಣೆ ಹಾಗೂ ತನಿಖೆ ನಂತರ  ಪ್ರಮುಖ ಆರೋಪಿಯ ಖಾತೆಯನ್ನು ಇನ್ಸಾಗ್ರಾಮ್ ನಲ್ಲಿ ಪತ್ತೆ ಹಚ್ಚಲಾಯಿತು. ಬಳಿಕ ಆಂಧ್ರಪ್ರದೇಶದ ಗುಂಟೂರಿಗೆ ತೆರಳಿ ಆತನನ್ನು ಬಂಧಿಸಲಾಯಿತು ಎಂದು ಡಿಸಿಪಿ ತಿಳಿಸಿದರು. 

ವಿಚಾರಣೆಯ ನಂತರ ಆರೋಪಿ, ರಶ್ಮಿಕಾ ಅವರ ದೊಡ್ಡ ಅಭಿಮಾನಿಯಾಗಿದ್ದು, ಫ್ಯಾನ್ ಪೇಜ್‌ಗಳನ್ನು ಸೃಷ್ಟಿಸುತ್ತಿರುವುದಾಗಿ ತಿಳಿಸಿದ್ದಾನೆ.  ಆತ ಮತ್ತಿಬ್ಬರು ಹೆಸರಾಂತ ಸೆಲೆಬ್ರಿಟಿಗಳ ಎರಡು ಫ್ಯಾನ್ ಪೇಜ್‌ಗಳನ್ನು ಸಹ ರಚಿಸಿದ್ದಾನೆ.. ರಶ್ಮಿಕಾ ಪೇಜ್‌ನ ಫಾಲೋವರ್‌ಗಳನ್ನು ಹೆಚ್ಚಿಸಲು, ನವೀನ್  ಡೀಪ್‌ಫೇಕ್ ವೀಡಿಯೊವನ್ನು ರಚಿಸಿ ಅಕ್ಟೋಬರ್ 13 ರಂದು ಫ್ಯಾನ್ ಪೇಜ್‌ನಲ್ಲಿ ಪೋಸ್ಟ್ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಡಿಸಿಪಿ ಹೇಳಿದರು.

ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸಂಬಂಧ ನವೆಂಬರ್ 10 ರಂದು ದೆಹಲಿಯ ವಿಶೇಷ ಪೂಲೀಸ್ ಘಟಕವಾದ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (IFSO) ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 465 (ನಕಲಿಗೆ ಶಿಕ್ಷೆ) ಮತ್ತು 469 (ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದಿಂದ ನಕಲಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66C ಮತ್ತು 66E ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 

ಎಫ್‌ಐಆರ್ ದಾಖಲಿಸಿದ ಕೂಡಲೇ ನಕಲಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಆರೋಪಿಯನ್ನು ಗುರುತಿಸಲು ಮತ್ತು ಯುಆರ್ ಎಲ್ ಮತ್ತಿತರ ವಿವರ ಪಡೆಯಲು ಮೆಟಾಗೆ  ಐಎಫ್‌ಎಸ್‌ಒ ಘಟಕ ಪತ್ರ ಬರೆದಿತ್ತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com