
ವಿಕ್ರಾಂತ್ ರೋಣ(2022) ನಂತರ ಕುತೂಹಲದಿಂದ ಕಾಯುತ್ತಿರುವ ತಮ್ಮ ಅಭಿಮಾನಿಗಳಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಿಹಿ ಸುದ್ದಿ ನೀಡಿದ್ದು, 'ಮ್ಯಾಕ್ಸ್' ಚಿತ್ರ ಸ್ವಾತಂತ್ರ್ಯ ದಿನದಂದು ತೆರೆಗೆ ಬರುವ ಸಾಧ್ಯತೆ ಇದೆ.
“ಮ್ಯಾಕ್ಸ್ ಸಿನಿಮಾ ತಂಡದಿಂದ ಬಿಗ್ ಅಪ್ ಡೇಟ್ ಸಿಕ್ಕಿದ್ದು, ಸದ್ಯದಲ್ಲೇ ಮ್ಯಾಕ್ಸ್ ಸಿನಿಮಾ ಬಗ್ಗೆ ಎಕ್ಸೈಟ್ ಆಗಿರುವ ಸುದ್ದಿ ಕೊಡುವುದಾಗಿ ಪ್ರಕಟಣೆ ತಿಳಿಸಿದೆ.
ಬಾದ್‌ಶಾ ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ರೇಸ್ ಟ್ರ್ಯಾಕ್‌ಗೆ ಕಾಲಿಡುತ್ತಿದ್ದು, ವೀಕ್ಷಿಸಲು ಸಿದ್ಧರಾಗಿ! ಎಂದು ಸೋಮವಾರ ಮ್ಯಾಕ್ಸ್ ಚಿತ್ರದ ನಿರ್ಮಾಪಕ ಕಲೈಪುಲಿ ಎಸ್. ತನು ಅವರು ಘೋಷಣೆ ಮಾಡಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಉತ್ಸಾಹವನ್ನು ಹುಟ್ಟುಹಾಕಿದೆ.
ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಪ್ಯಾನ್-ಇಂಡಿಯಾ ನಟ ಸುದೀಪ್ ಅವರು ಮ್ಯಾಕ್ಸ್ ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ಮಾತನಾಡಿದ್ದರು ಮತ್ತು ಆಗಸ್ಟ್ ಬಿಡುಗಡೆಯಾಗಲಿದೆ ಎಂದು ಹೇಳಿದ್ದರು.
ಇದೀಗ ನಿರ್ಮಾಪಕರು ಚಿತ್ರ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸದಿದ್ದರೂ, ಸ್ವಾತಂತ್ರ್ಯ ದಿನ ಮತ್ತು ನಂತರದ ರಜಾದಿನದ ವಾರಾಂತ್ಯವನ್ನು ಲಾಭ ಮಾಡಿಕೊಳ್ಳಲು ಆಗಸ್ಟ್ 15 ರಂದು ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಗಣೇಶ್ ಅವರ ಕೃಷ್ಣಂ ಪ್ರಣಯ ಸಖಿ, ದಿಗಂತ್ ಅಭಿನಯದ ಪೌಡರ್, ಮತ್ತು ಇಂದ್ರಜಿತ್ ಲಂಕೇಶ್ ಅವರ ಗೌರಿ ಸೇರಿದಂತೆ ಇತರ ಚಿತ್ರಗಳು ಸಹ ಸ್ವಾತಂತ್ರ್ಯ ದಿನದಂದು ಬಿಡುಗಡೆಗೆ ಸಿದ್ಧವಾಗಿವೆ.
ವಿಜಯ್ ಕಾರ್ತಿಕೇಯ ನಿರ್ದೇಶಿಸಿದ, ಮ್ಯಾಕ್ಸ್ ಒಂದು ಆಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ಆಗಿದ್ದು, ಈ ಚಿತ್ರದಲ್ಲಿ ಸುದೀಪ್ ಅವರು ಖಾಕಿ ಧರಿಸಿದ್ದಾರೆ ಮತ್ತು ವಿ ಕ್ರಿಯೇಷನ್ಸ್ ಜೊತೆಗೆ ಕಿಚ್ಚ ಕ್ರಿಯೇಶನ್ಸ್ ಬ್ಯಾನರ್‌ನಡಿಯಲ್ಲಿ ಸಹ-ನಿರ್ಮಾಪಕರಾಗಿದ್ದಾರೆ.
Advertisement