
'ಹ್ಯಾಟ್ರಿಕ್ ಹೀರೋ' ಶಿವರಾಜ್ ಕುಮಾರ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಭೈರವನ ಕೊನೆ ಪಾಠ' ಸಿನಿಮಾವನ್ನು ಹೇಮಂತ್ ಎಂ ರಾವ್ ನಿರ್ದೇಶವ ಮಾಡಲಿದ್ದಾರೆ. ಈಚೆಗಷ್ಟೇ ಇದರ ಟೈಟಲ್ ಎಲ್ಲರಲ್ಲೂ ಕುತೂಹಲ ಹುಟ್ಟುಹಾಕಿತ್ತು.
ಇದೀಗ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿರುವ ಚಿತ್ರತಂಡ, ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಅಡ್ವಾನ್ಸ್ ಆಗಿಯೇ ಗಿಫ್ಟ್ ನೀಡಿದೆ. ಈ ಲುಕ್ ನೋಡಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. ಬಿಳಿಗಡ್ಡ ಬಿಟ್ಟುಕೊಂಡು ಶಿವರಾಜ್ ಕುಮಾರ್ ಎಂಟ್ರಿ ನೀಡಿದ್ದಾರೆ. ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಎರಡು ಪೋಸ್ಟರ್ ಗಳಲ್ಲಿ ಎರಡು ರೀತಿಯ ಲುಕ್ ಮೂಲಕ ಮಾಸ್ ಲೀಡರ್ ಪ್ರತ್ಯಕ್ಷರಾಗಿದ್ದಾರೆ. ಯುದ್ಧಕ್ಕೆ ಸಜ್ಜಾದ ಪೋಷಾಕು, ಬೆನ್ನಿಗೆ ಬಾಣಗಳನ್ನು ಇಟ್ಟುಕೊಂಡಿದ್ದು, ಹಿಂಭಾಗದಲ್ಲಿ ಕುದುರೆ ಇದೆ.
ಹಿಂದೆ ಅಪ್ಪಾಜಿ ಈ ರೀತಿಯ ಪಾತ್ರಗಳನ್ನು ಮಾಡುವುದರಲ್ಲಿ ಹೆಸರುವಾಸಿಯಾಗಿದ್ದರು. ಭೈರವನ ಪಾತ್ರ ಮಾಡುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಿರ್ದೇಶಕ ಹೇಮಂತ್ ರಾವ್ ಮತ್ತು ತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಈ ಚಿತ್ರಕ್ಕೆ 'ಲೆಸನ್ಸ್ ಫಾರ್ ಆಲ್ ಕಿಂಗ್ಸ್' ಎಂಬ ಅಡಿಬರಹವಿದ್ದು, ಇದು ಕಥೆಗೆ ತುಂಬಾ ಪೂರಕವಾಗಿದೆ. ವೃತ್ತಿ, ಬದುಕುವ ರೀತಿ ಎಲ್ಲದಕ್ಕೂ ನ್ಯಾಯ, ನೀತಿ ಮತ್ತು ಧರ್ಮ ಇದ್ದೇ ಇರುತ್ತದೆ. ಅದನ್ನು ಮೀರಿದರೆ ಏನಾಗುತ್ತದೆ? ಇವುಗಳನ್ನು ತಿಳಿಸಲು ಫಿಲಾಸಫರ್ ಅಥವಾ ಗುರು ಇರುತ್ತಾರೆ. ಅವರೆಲ್ಲರೂ ಹೇಳುವ ಕೊನೆಯ ಪಾಠ ಏನು ಎನ್ನುವುದೇ ಈ ಸಿನಿಮಾ ಕಥೆ. ಇಂತಹ ಪಾತ್ರ ಮಾಡುವ ಆಸೆ ನನಗೆ ಬಹಳ ವರ್ಷಗಳಿಂದ ಇತ್ತು. ಈಗ ಅದು ನೆರವೇರಿದೆ" ಎಂದು ಶಿವರಾಜ್‌ಕುಮಾರ್ ತಿಳಿಸಿದ್ದಾರೆ.
ಇದು ನನ್ನ ಮಹತ್ವಾಕಾಂಕ್ಷೆಯ ಚಿತ್ರ. ಶಿವಣ್ಣ ಅವರಂತಹ ಸೂಪರ್ ಸ್ಟಾರ್ ಸಿನಿಮಾವನ್ನು ನಿರ್ದೇಶಿಸುವುದು ನನ್ನ ಪಾಲಿಗೆ ದೊಡ್ಡ ಜವಾಬ್ದಾರಿಯ ಮತ್ತು ಸವಾಲಿನ ಕೆಲಸವಾಗಿದೆ. ಶಿವರಾಜ್‌ಕುಮಾರ್ ಅವರ ಜೊತೆ ಕೆಲಸ ಮಾಡುವುದು ಪ್ರತಿಯೊಬ್ಬ ನಿರ್ದೇಶಕರ ಆಸೆ ಆಗಿರುತ್ತದೆ. ಇದು ಕೆಲವು ಶತಮಾನಗಳ ಹಿಂದಿನ ಸಿನಿಮಾ, ಈ ಫಸ್ಟ್ ಲುಕ್‌ಗಾಗಿ ಇಡೀ ದಿನ ಬೆಟ್ಟದ ಮೇಲೆ ಫೋಟೋಶೂಟ್ ಮಾಡಿದ್ದೇವೆ. ಪ್ರತಿಕೂಲ ಹವಾಮಾನದ ನಡುವೆಯೂ ಶಿವ ರಾಜ್‌ಕುಮಾರ್ ಅವರು ಚಿತ್ರೀಕರಣವನ್ನು ನಿರ್ವಹಿಸಿದ ಬಗ್ಗೆ ಇಡೀ ತಂಡವು ವಿಸ್ಮಯಗೊಂಡಿತು ಎಂದು ಹೇಮಂತ್ ಎಂ ರಾವ್ ಹೇಳಿದ್ದಾರೆ. ಭೈರವನ ಕೊನೆಯ ಪಾಠ ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಂತೆ, ತಂಡವು ತಾಂತ್ರಿಕ ಸಿಬ್ಬಂದಿ ಮತ್ತು ಪಾತ್ರವರ್ಗವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.
Advertisement