
ಯುವ ಪ್ರತಿಭೆ ರೋಹಿತ್ ಅಭಿನಯದ ರಕ್ತಾಕ್ಷ ಚಿತ್ರ ಜುಲೈ.26 ರಂದು ಚಿತ್ರ ಮಂದಿರಕ್ಕೆ ಕಾಲಿಡಲು ಸಜ್ಜಾಗಿದೆ.
ಇತ್ತೀಚೆಗೆ ನಡೆದ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟ ವಿಜಯ್ ರಾಘವೇಂದ್ರ ಮತ್ತು ಸುಮನ್ ನಗರ್ಕರ್ ಅವರ ಸಮ್ಮುಖದಲ್ಲಿ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿತು.
ಈ ಸಂದರ್ಭದಲ್ಲಿ ಮಾತನಾಡಿದ ನಟ ವಿಜಯ್ ರಾಘವೇಂದ್ರ ಅವರು, ಕಥೆ ಬಗ್ಗೆ ಕಡಿಮೆ ಗೊತ್ತಿದ್ದರೆ ಒಳ್ಳೆದು. ಕಥೆ ಹೆಚ್ಚು ಬಿಟ್ಟು ಕೊಟ್ಟರೂ ಕಷ್ಟ. ಕಥೆಯ ಸುಳಿವೇ ಇಲ್ಲದೇ ಊಹಾಪೋಹ ಮಾಡಿಕೊಂಡು ಥಿಯೇಟರ್ ಗೆ ಬರುವ ತರ ಮಾಡಿದರೂ ಕಷ್ಟ. ಯಾಕೆಂದರೆ ಜನ ಈಗ ಎಷ್ಟರ ಮಟ್ಟಿಗೆ ಮುಂದುವರೆದಿದ್ದಾರೆ ಎಂದರೆ ಸಣ್ಣ ಟ್ರೇಲರ್ , ಟೀಸರ್ ತಮ್ಮದೇ ಕಲ್ಪನೆ ಮೂಲಕ ಥಿಯೇಟರ್ ಗೆ ಬರ್ತಾರೆ. ಕಥೆ ಅವರದ್ದು ಆದರೆ ಒಪ್ಪಿಕೊಳ್ಳುತ್ತಾರೆ. ಕಥೆ ಬೇರೆಯದದ್ದಾರೆ ನಾವು ಅಂದುಕೊಂಡು ಬಂದ ಕಥೆಯಲ್ಲ ಎಂದು ಬೇಜಾರು ಆಗುತ್ತಾರೆ. ಆದರೆ ಸಣ್ಣ ಎಳೆ, ಜನರ ನಂಬಿಕೆ ವಿಶ್ವಾಸ ಗೆಲ್ಲುವುದು ಸಿನಿಮಾದ ಮುಖಾಂತರ ಗೆಲ್ಲುವುದು ಸಾಹಸ. ಅಂತಹ ಸಾಹಸಕ್ಕೆ ರೋಹಿತ್ ಕೈ ಹಾಕಿದ್ದಾರೆ. ಬಹಳ ಚೆನ್ನಾಗಿ ಟ್ರೇಲರ್ ಮೂಡಿಬಂದಿದೆ. ಕುತೂಹಲ ಕೆರಳಿಸುತ್ತದೆ. ಆಕ್ಷನ್ ಇದೆ. ಥ್ರಿಲ್ಲರ್ ಎಲಿಮೆಂಟ್ ಇದೆ. ನನಗೂ ಆಡಿಯನ್ಸ್ ಆಗಿ ಕ್ಯೂರಿಯಾಸಿಟಿ ಹೆಚ್ಚುವಂತೆ ಮಾಡಿದೆ. ಬಹಳ ಕಷ್ಟಪಟ್ಟಿದ್ದಾರೆ ರೋಹಿತ್. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹೇಳಿದರು.
ಹಿರಿಯ ನಟಿ ಸುಮನ್ ನಗರ್ಕರ್ ಮಾತನಾಡಿ, ಟ್ರೇಲರ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಸರಣಿ ಕೊಲೆ ಇದೆ ಅನ್ನೋ ಕ್ಲ್ಯೂ ಇದೆ. ಮೂರ್ನಾಲ್ಕು ಜನ ಹೀರೋಯಿನ್ ಇರುವುದು ಗೊತ್ತಾಗುತ್ತದೆ. ಹೀಗಾಗಿ ಸರಣಿ ಕೊಲೆಯಾಗುತ್ತದೆ ಎಂಬ ಕ್ಲ್ಯೂ ಕೂಡ ಸಿಕ್ತು. ನನ್ನ ಪತಿ ಪೊಲೀಸ್ ಪಾತ್ರದಲ್ಲಿ ಮಾಡಿದ್ದಾರೆ. ಕಥೆ ಅವರು ಕೂಡ ಹೇಳಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಪ್ರೋತ್ಸಾಹ ಸಿಗಬೇಕು ಎಲ್ಲರೂ ಪ್ರೋತ್ಸಾಹ ಕೊಡಬೇಕು. ಜನ ಥಿಯೇಟರ್ ಗೆ ಬರಬೇಕು. ಅವರು ನಾವು ಮಾಡುವ ಕೆಲಸ ನೋಡಬೇಕು. ಈ ರೀತಿಯ ಮಿಸ್ಟ್ರೀ ಸ್ಟೋರಿಯನ್ನು ಥಿಯೇಟರ್ ನಲ್ಲಿ ನೋಡಿ ಎಂದು ಹೇಳಿದರು.
ರೋಹಿತ್ ಈಗಾಗಲೇ ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಹೀರೋ ಆಗಿರುವ ಜೊತೆಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಸಹ ಮಾಡಿದ್ದಾರೆ.
ವಾಸುದೇವ್ ಎಸ್.ಎನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರೋಹಿತ್ ರೀತಿಯಲ್ಲಿಯೇ ವಾಸುದೇವ್ ಅವರಿಗೂ ಇದು ಮೊದಲ ಸಿನಿಮಾ. ರೋಹಿತ್, ವಾಸುದೇವ್ ಜೊತೆಗೆ ಇನ್ನೊಂದಿಷ್ಟು ಹೊಸ ಪ್ರತಿಭೆಗಳು ಸೇರಿ ಈ ಸಿನಿಮಾವನ್ನು ಮಾಡಿದ್ದು, ಧೀರೇಂದ್ರ ದಾಸ್ ಸಂಗೀತ ನೀಡಿದ್ದಾರೆ.
ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ನಿವೀಕ್ಷ ನಾಯ್ಡು, ಗುರುದೇವ ನಾಗರಾಜ, ಪ್ರಭು, ವಿಶ್ವ, ಭದ್ರಿ ನಾರಾಯಣ,, ಬಸವರಾಜ ಆದಾಪುರ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖಳನಾಯಕನ ಪಾತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ.
Advertisement