
ಕೆಲವು ಪ್ರೊಡಕ್ಷನ್ ಹೌಸ್‌ಗಳ ಪ್ರಯತ್ನಗಳ ಹೊರತಾಗಿಯೂ, ಕನ್ನಡ ಚಿತ್ರರಂಗದಲ್ಲಿ ಇನ್ನೂ ವೆಬ್ ಸರಣಿಗಳ ನಿರ್ಮಾಣ ಅಷ್ಟೇನು ಮುನ್ನಲೆಗೆ ಬಂದಿಲ್ಲ. ಇದೀಗ, ಉದಯೋನ್ಮುಖ ಪ್ರತಿಭೆ ಭಗೀರಥ ಈ ವೇದಿಕೆಯಲ್ಲಿ ಮಹತ್ವದ ಛಾಪು ಮೂಡಿಸಲು ಸಜ್ಜಾಗಿದ್ದು, ಬರವಣಿಗೆ ವಿಭಾಗದಲ್ಲಿ ತಮ್ಮ ಕೌಶಲ್ಯವನ್ನು ಮೆರೆದಿದ್ದಾರೆ. ಇಂದ್ರಜಿತ್ ಲಂಕೇಶ್ ಅವರ ದೇವ್ ಸನ್ ಆಫ್ ಮುದ್ದೇಗೌಡ (2012) ಮತ್ತು ಶ್ರೀನಿವಾಸ್ ರಾಜು ನಿರ್ದೇಶನದ ದಂಡುಪಾಳ್ಯ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅವರು ಇದೀಗ ವೆಬ್ ಸರಣಿಯೊಂದಿಗೆ ತಮ್ಮ ಚೊಚ್ಚಲ ನಿರ್ದೇಶನಕ್ಕೆ ಸಜ್ಜಾಗುತ್ತಿದ್ದಾರೆ.
ಭಗೀರಥ ಅವರ ನಿರ್ದೇಶನದ ಮುಂಬರುವ ವೆಬ್ ಸರಣಿಯು ಕರ್ನಾಟಕವನ್ನು ಬೆಚ್ಚಿಬೀಳಿಸಿದ ಅತಿದೊಡ್ಡ ಬಿಟ್‌ಕಾಯಿನ್ ಹಗರಣಗಳಲ್ಲಿ ಒಂದನ್ನು ಅನ್ವೇಷಿಸುತ್ತದೆ. ಭಗೀರಥ ಅವರು ತಮ್ಮ ಪುಸ್ತಕ ಅಮೀಬಾವನ್ನು ಆಧರಿಸಿ ವೆಬ್ ಸರಣಿ ಮೂಲಕ ಬಿಟ್‌ಕಾಯಿನ್ ಪ್ರಪಂಚದ ಮೇಲೆ ಬೆಳಕು ಚೆಲ್ಲಲು ಮುಂದಾಗಿದ್ದಾರೆ.
'ವೆಬ್ ಸರಣಿಗಳಲ್ಲಿ ಹಗರಣ ಆಧಾರಿತ ವಿಷಯಗಳಿಗೆ ಬಂದಾಗ, ಅನೇಕ ಕಥೆಗಳನ್ನು ಪುಸ್ತಕಗಳಿಂದಲೇ ಅಳವಡಿಸಿಕೊಳ್ಳಲಾಗಿದೆ. ಉದಾಹರಣೆಗೆ, ಜಿಗ್ನಾ ವೋರಾ ಅವರ 'ಬಿಹೈಂಡ್ ಬಾರ್ಸ್ ಇನ್ ಬೈಕುಲ್ಲಾ- ಮೈ ಡೇಸ್ ಇನ್ ಪ್ರಿಸನ್' ಆಧರಿತ ಸ್ಕೂಪ್, 1992 ರ ಭಾರತೀಯ ಷೇರು ಮಾರುಕಟ್ಟೆ ಹಗರಣವನ್ನು ಆಧರಿಸಿದ 'ಸ್ಕ್ಯಾಮ್ 1992, ಸಂಜಯ್ ಸಿಂಗ್ ಅವರ ತೆಲ್ಗಿ ಸ್ಕ್ಯಾಮ್ ರಿಪೋರ್ಟರ್ ಕಿ ಡೈರಿ ಆಧರಿತ 'ಸ್ಕ್ಯಾಮ್ 2003; ತೆಲ್ಗಿ ಸ್ಟೋರಿ, ಮತ್ತು ವಿಕ್ರಮ್ ಚಂದ್ರ ಅವರ ಸೇಕ್ರೆಡ್ ಗೇಮ್ಸ್ ಆಧಾರಿತ 'ಸೇಕ್ರೆಡ್ ಗೇಮ್ಸ್' ಇವೆಲ್ಲವೂ ನನ್ನ ಮೇಲೆ ಪ್ರಭಾವ ಬೀರಿವೆ. ಅಮೀಬಾ ಎಂಬ ಪುಸ್ತಕವನ್ನು ಬರೆದ ನಂತರ, ನಾನು ಪ್ರಕ್ರಿಯೆಯನ್ನು ಆನಂದಿಸಿದೆ ಮತ್ತು ಈಗ ಅದನ್ನು ವೆಬ್ ಸರಣಿಗೆ ಅಳವಡಿಸುವ ಗುರಿಯನ್ನು ಹೊಂದಿದ್ದೇನೆ' ಎಂದು ಭಗೀರಥ ಹೇಳುತ್ತಾರೆ.
ಸದ್ಯ ಉನ್ನತ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಈ ವರ್ಷಾಂತ್ಯದ ವೇಳೆಗೆ ಭಗೀರಥ ಅವರು ಸರಣಿಯ ಚಿತ್ರೀಕರಣವನ್ನು ಪ್ರಾರಂಭಿಸಲು ಸಜ್ಜಾಗುತ್ತಿದೆ. 'ನನ್ನ ವೆಬ್ ಸರಣಿಯನ್ನು ಕನ್ನಡದಲ್ಲಿ ನಿರ್ಮಿಸಲಾಗುವುದು ಮತ್ತು ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡಲು ಡಬ್ ಮಾಡಲಾಗುತ್ತದೆ' ಎಂದು ಅವರು ಹೇಳುತ್ತಾರೆ.
Advertisement