
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ನಟ ದರ್ಶನ್ ಬಂಧನ ಕುರಿತಂತೆ ನಿರ್ಮಾಪಕ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಮೆಂಟ್ ಮಾಡಿದ್ದಾರೆ.
ಪವಿತ್ರಾಗೌಡಗೆ ಅಶ್ಲೀಲ ಫೋಟೋ, ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿದ ಅಭಿಮಾನಿ 33 ವರ್ಷದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಅವರ ಸ್ನೇಹಿತೆ ಪವಿತ್ರಾ ಗೌಡ ಮತ್ತು ಇತರ 11 ಮಂದಿಯನ್ನು ಬಂಧಿಸಲಾಗಿದೆ. ಈ ಘಟನೆಯು ಚಿತ್ರೋಧ್ಯಮಕ್ಕೆ ಮತ್ತು ಅಭಿಮಾನಿಗಳಲ್ಲಿ ಆತಂಕದ ಸಂದೇಶವನ್ನು ಕಳುಹಿಸಿದೆ, ಇದು ಸೆಲೆಬ್ರಿಟಿ ಆರಾಧನೆಯ ಕರಾಳ ಭಾಗವನ್ನು ಎತ್ತಿ ತೋರಿಸುತ್ತದೆ ಎಂದು ರಾಮಗೋಪಾಲ್ ವರ್ಮಾ ಹೇಳಿದ್ದಾರೆ.
ತಮ್ಮ ನೆಚ್ಚಿನ ನಟನ ವೈಯಕ್ತಿಕ ಜೀವನದಲ್ಲಿ ಮಧ್ಯಪ್ರವೇಶಿಸಿದ ಒಬ್ಬ ಡೈ ಹಾರ್ಡ್ ಅಭಿಮಾನಿಯನ್ನು ಹತ್ಯೆ ಮಾಡಲು ಮತ್ತೊಬ್ಬ ಡೈ ಹಾರ್ಡ್ ಅಭಿಮಾನಿಯನ್ನು ಬಳಸಿರುವುದು ನಟರ ಆರಾಧನೆಯ ಸಿಂಡ್ರೋಮ್‌ನ ವಿಲಕ್ಷಣತೆಗೆ ಸೂಕ್ತ ಉದಾಹರಣೆಯಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ತಮ್ಮ ಜೀವನವನ್ನು ಹೇಗೆ ನಡೆಸಬೇಕು ಎಂದು ಆದೇಶಿಸಲು ಬಯಸುವುದು ಅದೇ ಸಿಂಡ್ರೋಮ್‌ನ ಅನಿವಾರ್ಯ ಅಡ್ಡ ಪರಿಣಾಮ ಎಂದು ರಾಮಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಚಿತ್ರದುರ್ಗದ ಫಾರ್ಮಾಸಿಸ್ಟ್ ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದರು ಎನ್ನಲಾಗಿದೆ. ಪ್ರತೀಕಾರವಾಗಿ, ದರ್ಶನ್, ಪವಿತ್ರಾ ಮತ್ತು ಇತರ 11 ಜನರು ಆತನನ್ನು ಪತ್ತೆಹಚ್ಚಿ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆತಂದು ಅಲ್ಲಿ ಬೆಲ್ಟ್ ಮತ್ತು ದೊಣ್ಣೆಗಳಿಂದ ಹೊಡೆದು ಚಿತ್ರಹಿಂಸೆ ನೀಡಿದ್ದಾರೆ. ಮಾರಣಾಂತಿಕ ಹಲ್ಲೆಯಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದು ನಂತರ ಆತನ ಮೃತದೇಹವನ್ನು ಸುಮನಹಳ್ಳಿ ಬಳಿ ಚರಂಡಿಗೆ ಎಸೆದಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ರಾಮ್ ಗೋಪಾಲ್ ವರ್ಮಾ ಅವರ ಟ್ವೀಟ್, ಅಭಿಮಾನಿಗಳ ಅತೀವ ಭಕ್ತಿಯ ವಿಶಾಲವಾದ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ. ಆರ್‌ಜಿವಿ ಈ ಹಿಂದೆ ಅಭಿಮಾನಿಗಳ ಕಟ್ಟಾರಾಧನೆಯನ್ನು ಟೀಕಿಸಿದ್ದರು. ತೆಲುಗು ನಟನ ಮೇಲಿನ ಭಕ್ತಿ ಹೆಸರಿನಲ್ಲಿ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಮತ್ತು ಅವರ ಕೆಲಸಗಳನ್ನು ಟೀಕಿಸಿದ್ದರು. ದಕ್ಷಿಣ ಭಾರತದ ಚಿತ್ರೋಧ್ಯಮದಲ್ಲಿ ಪ್ರಚಲಿತದಲ್ಲಿರುವ ಅಭಿಮಾನಿಗಳ ಆರಾಧನೆಯ ಸಮಸ್ಯೆಗಳನ್ನು ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಒತ್ತಿಹೇಳಿದ್ದಾರೆ.
ಈ ಹಿಂದೆ ಬ್ಯಾನರ್ ಕಟ್ಟುವಾಗ ಹಾಗೂ ಅಭಿಮಾನಿಗಳ ನಡುವಿನ ಸಂಘರ್ಷದಲ್ಲಿ ಅನೇಕ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು.
Advertisement