ಖ್ಯಾತ ಖಳನಟ ಸುಧೀರ್ ಕಿರಿಯಪುತ್ರ ತರುಣ್ ಸುಧೀರ್ ಮದುವೆ ಫಿಕ್ಸ್ ಆಗಿದೆ ಎನ್ನುವ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಮಗನಿಗೆ 40 ದಾಟಿದ್ರೂ ಮದುವೆಯಾಗಿಲ್ಲ ಎಂಬ ಚಿಂತೆಯಲ್ಲಿದ್ದ ತಾಯಿ ಮಾಲತಿ ಇದೀಗ ಮಗನ ಮದುವೆ ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೆರಡು ತಿಂಗಳಲ್ಲಿಯೇ ತರುಣ್ ಸುಧೀರ್ ಮದುವೆ ನಡೆಯಲಿದೆ ಎನ್ನುವ ಊಹಾಪೋಹ ಶುರುವಾಗಿದೆ. ತರುಣ್ ಸುಧೀರ್ ಮದುವೆ ಸಿದ್ಧತೆಗಳು ಶುರುವಾಗಿದ್ದು, ಕನ್ನಡದ ಹೆಸರಾಂತ ನಟಿಯ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ತರುಣ್ ಸುದೀರ್ ‘ಮಹಾನಟಿ’ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕೂಡ ಗುರುತಿಸಿಕೊಂಡಿದ್ದಾರೆ. ನಟಿ ಸೋನಾಲ್ ಮಾಂಟೆರೊ ಕೈ ಹಿಡಿಯುತ್ತಾರೆ ಎಂದು ವರದಿಯಾಗಿದೆ. ತರುಣ್ ನಿರ್ದೇಶನದ ‘ರಾಬರ್ಟ್’ ಚಿತ್ರದಲ್ಲಿ ರಾಘವ ವಿನೋದ್ ಪ್ರಭಾಕರ್ ಜೋಡಿ ಆಗಿ ಸೋನಲ್ ಮಿಂಚಿದ್ದರು.
ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಸೋನಲ್ ಮೊದಲಿಗೆ ತುಳು ಸಿನಿಮಾಗಳಲ್ಲಿ ನಟಿಸಿದ್ದರು. ‘ಅಭಿಸಾರಿಕೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಇದೀಗ ಈ ಜೋಡಿ ಸಪ್ತಪದಿ ತುಳಿಯಲಿದೆ ಎನ್ನಲಾಗಿದೆ. ತರುಣ್ ಹಾಗೂ ಸೋನಲ್ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
Advertisement