ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್ ಕಳೆದ ಈ ವರ್ಷ ತೆರೆಕಂಡ ಸ್ಯಾಂಡಲ್‌ವುಡ್‌ನ ʼಯುವʼ ಸಿನಿಮಾ ಮೂಲಕ ನಾಯಕನಾಗಿ ಗಮನ ಸೆಳೆದಿದ್ದಾರೆ. ಈ ಚಿತ್ರ ಬಿಡುಗಡೆಯಾಗಿ ಹಲವು ತಿಂಗಳು ಕಳೆದಿದ್ದರೂ ಅವರ ಹೊಸ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ಇದೀಗ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದ್ದು, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯುವ ರಾಜ್ ಕುಮಾರ್ ಅಭಿನಯದ ಎರಡನೇ ಚಿತ್ರದ ಶೀರ್ಷಿಕೆ ಘೋಷಣೆಯಾಗಿದೆ. ಈ ಚಿತ್ರಕ್ಕೆ ʼಎಕ್ಕʼ (Ekka) ಎಂಬ ಶೀರ್ಷಿಕೆ ಇಡಲಾಗಿದೆ. ಯುವ ನಟನೆಯ ಮುಂದಿನ ಸಿನಿಮಾ ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿದೆ. ಆಯುಧವೊಂದನ್ನು ಹಿಡಿದು ರಕ್ತಸಿಕ್ತವಾಗಿ ಯುವ ಎಂಟ್ರಿ ಕೊಟ್ಟಿದ್ದಾರೆ. ಖಡಕ್ ಆಗಿ ಲುಕ್ ಕೊಟ್ಟಿದ್ದಾರೆ. ಈ ಸಿನಿಮಾಗೆ ‘ಎಕ್ಕ’ (Ekka) ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಈ ಪೋಸ್ಟರ್ ಶೇರ್ ಮಾಡಿ, ಪ್ರಪಂಚದ ಪಾಪದಲ್ಲಿ, ಎಲ್ಲರೂ ಪಾಲುದಾರರೂ ಎಂದು ಯುವ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಒಬ್ಬ ಮನುಷ್ಯನು ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಹೇಳುವ ಕಥೆಯೇ ʼಎಕ್ಕʼ. ಎಕ್ಕʼ ಚಿತ್ರವನ್ನು ರೋಹಿತ್ ಪದಕಿ ಹಾಗೂ ವಿಕ್ರಂ ಹತ್ವಾರ್ ಬರೆದು, ರೋಹಿತ್ ಪದಕಿ ನಿರ್ದೇಶಿಸಲಿದ್ದಾರೆ. ಸದ್ಯಕ್ಕೆ ನಾಯಕನಾಗಿ ಯುವ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಬಿಟ್ಟರೆ ಉಳಿದ ತಾರಾಬಳಗದ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಲಿದ್ದು, ಸತ್ಯ ಹೆಗಡೆ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ದೀಪು ಎಸ್. ಕುಮಾರ್ ಸಂಕಲನಕಾರರಾಗಿರುತ್ತಾರೆ ಮತ್ತು ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಲಿದ್ದಾರೆ. ಈ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಪಿ.ಆರ್.ಕೆ.ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ, ಜಯಣ್ಣ ಹಾಗೂ ಭೋಗೇಂದ್ರ ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಮತ್ತು ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ನ. 28ಕ್ಕೆ ಚಿತ್ರೀಕರಣ ಆರಂಭವಾಗಲಿದ್ದು, 2025ಕ್ಕೆ ಚಿತ್ರ ತೆರೆ ಕಾಣಲಿದೆ.
Advertisement