ಬೆಂಗಳೂರು: ಆತ್ಮಹತ್ಯೆಗೆ ಶರಣಾಗಿದ್ದ ಕನ್ನಡ ಸ್ಟಾರ್ ನಿರ್ದೇಶಕ ಗುರುಪ್ರಸಾದ್ ಅವರ ಅಂತ್ಯಕ್ರಿಯೆ ನಗರದ ವಿಲ್ಸನ್ ಗಾರ್ಡನ್ ಚಿತಾಗಾರಾದಲ್ಲಿ ಭಾನುವಾರ ಸಂಜೆ ನಡೆಯಿತು. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಬ್ರಾಹ್ಮಣ ಸಂಪ್ರದಾಯದಂತೆ ಗುರುಪ್ರಸಾದ್ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಮಾಡಲಾಗಿದ್ದು, ಪಂಚಭೂತಗಳಲ್ಲಿ ಲೀನರಾದರು.
ಎರಡನೇ ಪತ್ನಿ ಸಹೋದರನಿಂದ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಗುರುಪ್ರಸಾದ್ ಅಂತ್ಯ ಸಂಸ್ಕಾರದಲ್ಲಿ ನಟ ದುನಿಯಾ ವಿಜಯ್, ಡಾಲಿ ಧನಂಜಯ, ಸತೀಶ್ ನೀನಾಸಂ, ನಿರ್ದೇಶಕ ಯೋಗರಾಜ್ ಭಟ್, ತಬಲಾ ನಾಣಿ ಮತ್ತಿತರರು ಉಪಸ್ಥಿತರಿದ್ದರು.
ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಮಾದನಾಯಕಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಹೆವೆನ್ ಅಪಾರ್ಟ್ ಮೆಂಟ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರಿಗೆ 52 ವರ್ಷ ವಯಸ್ಸಾಗಿತ್ತು. ನಿನ್ನೆ ಅವರು 52ನೇ ಹುಟ್ಟುಹಬ್ಬವನ್ನು ಆಚರಿಸಬೇಕಾಗಿತ್ತು. ಆದರೆ 3 ದಿನಕ್ಕೂ ಮುನ್ನವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
1972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006 ರಲ್ಲಿ ತೆರೆಕಂಡ ‘ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ವೃತ್ತಿ ಜೀವನ ಆರಂಭಿಸಿದರು. ಇದು ಜಗ್ಗೇಶ್‌ರ 100ನೇ ಚಿತ್ರ. 2009 ರಲ್ಲಿ ಇದೇ ಜೋಡಿ ‘ಎದ್ದೇಳು ಮಂಜುನಾಥ’ ಚಿತ್ರದ ಮೂಲಕ ಮತ್ತೊಂದು ಹಿಟ್ ಚಿತ್ರ ನೀಡಿತ್ತು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ದೊರಕಿತು. ನಂತರ ‘ಡೈರೆಕ್ಟರ್ ಸ್ಪೇಷಲ್, ಎರಡನೇ ಸಲ’ ಚಿತ್ರಗಳನ್ನು ನಿರ್ದೇಶಿಸಿದರು. ನಿರ್ದೇಶಕ ಮಾತ್ರವಲ್ಲದೇ ನಟನಾಗಿಯೂ ಮೈಲಾರಿ, ಹುಡುಗರು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಗುರು ಪ್ರಸಾದ್ ಅವರ ಆತ್ಮಹತ್ಯೆ ಕುರಿತು ತನಿಖೆ ನಡೆಸುತ್ತಿದ್ದಾರೆ.
Advertisement