'ಫಸ್ಟ್ ರ‍್ಯಾಂಕ್ ರಾಜು' ಸಿನಿಮಾ ಮೂಲಕ ಗಮನ ಸೆಳೆದಿದ್ದ ನಟ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಸಿನಿಮಾ ಡಿಸೆಂಬರ್ 27 ರಂದು ಬಿಡುಗಡೆಯಾಗುತ್ತಿದೆ.
ದೀಪಕ್ ಮಧುವನಹಳ್ಳಿ ನಿರ್ದೇಶನದ ಈ ಚಿತ್ರವು ಶುದ್ಧ ಮನೋರಂಜನೆ ಸಿನಿಮಾ ಆಗಿದೆ. ಹಲವು ದಿನಗಳ ಊಹಾಪೋಹಗಳ ನಂತರ ಕಳೆದ ಶನಿವಾರ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.
ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ ಮತ್ತು ಕಿರಣ್ ಭರ್ತೂರು ಅವರು ಮೋಷನ್ ಪೋಸ್ಟರ್ ಅನಾವರಣ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದರು.
ಗುರುನಂದನ್ ಅವರು 'ಫಸ್ಟ್ ರ‍್ಯಾಂಕ್ ರಾಜು' ಇಮೇಜ್ ನಿಂದ ಹೊರಬಂದಿದ್ದು, ಈ ಚಿತ್ರದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನಿರ್ದೇಶಕ ಮಧುವನಹಳ್ಳಿ ಅವರು ಹೇಳಿದ್ದಾರೆ.
‘ರಾಜು ಜೇಮ್ಸ್ ಬಾಂಡ್’ ಸಿನಿಮಾದಲ್ಲಿ ಯಾವುದೇ ಅಶ್ಲೀಲ ಸಂಭಾಷಣೆ ಇರುವುದಿಲ್ಲ. ಇದೊಂದು ಶುದ್ಧ ಮನೋರಂಜನೆ ಸಿನಿಮಾ ಆಗಿದೆ.. ಎರಡುಕಾಲು ಗಂಟೆಗಳ ಚಿತ್ರದಲ್ಲಿ ಮಕ್ಕಾಲು ಗಂಟೆ ನೀವು ನಗುವಿಗೆ ಮೀಸಲಿಡಬೇಕು. ವರ್ಷದ ಕೊನೆಯಲ್ಲಿ ನಗುನಗುತ್ತಾ ನೂತನ ವರ್ಷವನ್ನು ನಮ್ಮ ಸಿನಿಮಾ ಮೂಲಕ ಸ್ವಾಗತಿಸೋಣ’ ಎಂದರು.
‘ಫಸ್ಟ್ ರ‍್ಯಾಂಕ್ ರಾಜು’ ಸಿನಿಮಾದ ನಾಯಕ ಗುರುನಂದನ್ ಮಾತನಾಡಿ, ‘ಜೇಮ್ಸ್ ಬಾಂಡ್’ ರಾಜುಗೂ ‘ಫಸ್ಟ್ ರ‍್ಯಾಂಕ್’ ರಾಜೂಗೂ ಬಹಳ ವ್ಯತ್ಯಾಸ ಇದೆ. ಎರಡು ಪಾತ್ರಗಳು ಒಂದಕ್ಕೊಂದು ಬಹಳ ಭಿನ್ನ, ವೈರುದ್ಯ ಹೊಂದಿವೆ ಎಂದರು.
ಚಿತ್ರದಲ್ಲಿ ಮೃದುಲಾ ನಾಯಕಿಯಾಗಿ ನಟಿಸಿದ್ದು, ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲ, ಅಚ್ಯುತ್ ಕುಮಾರ್ ಮತ್ತು ಜೈ ಜಗದೀಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ನೃತ್ಯ ನಿರ್ದೇಶಕ ಮುರಳಿ ಅವರು ನಾಲ್ಕು ಹಾಡುಗಳನ್ನು ನಿರ್ದೇಶಿಸಿದ್ದಾರೆ, ಎರಡು ಭಾರತದಲ್ಲಿ ಮತ್ತು ಎರಡು ಲಂಡನ್‌ನಲ್ಲಿ ಚಿತ್ರೀಕರಿಸಲಾಗಿದೆ. ರಾಜು ಜೇಮ್ಸ್ ಬಾಂಡ್ ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.
Advertisement