ನಟ ವಸಿಷ್ಠ ಸಿಂಹ ಅವರು ತ್ರಿಬಾಣಧಾರಿ ಬಾರ್ಬರಿಕ್ ಸಿನಿಮಾದೊಂದಿಗೆ ಪ್ಯಾನ್-ಇಂಡಿಯಾ ಸಿನಿಮಾ ಮಾಡಲು ಸಿದ್ಧರಾಗಿದ್ದಾರೆ, ಇದು ಬಹು ಭಾಷೆಗಳಲ್ಲಿ ಬಿಡುಗಡೆಗೆ ರೆಡಿಯಾಗಿದೆ.
ಗಮನಾರ್ಹ ಅಭಿನಯಕ್ಕಾಗಿ ಹೆಸರುವಾಸಿಯಾದ ವಸಿಷ್ಟ ಅವರು ತೀವ್ರ ಮತ್ತು ಸೂಕ್ಷ್ಮ ಪಾತ್ರಗಳ ನಡುವೆ ಸಲೀಸಾಗಿ ಪರಿವರ್ತನೆ ಮಾಡುವ ಸಾಮರ್ಥ್ಯಕ್ಕಾಗಿ ಮನ್ನಣೆಯನ್ನು ಗಳಿಸಿದ್ದಾರೆ. ನಾರಪ್ಪ ಮತ್ತು ಒಡೆಲಾ ರೈಲು ನಿಲ್ದಾಣದ ಮೂಲಕ ತೆಲುಗಿನಲ್ಲಿ ತನ್ನ ಛಾಪು ಮೂಡಿಸಿದ ನಂತರ, ವಸಿಷ್ಟ ಈಗ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಮ್ಮ ವೃತ್ತಿ ಜೀವನ ಕೊಂಡೊಯ್ಯುತ್ತಿದ್ದಾರೆ. ಇದರ ಮೊದಲ ಹಂತವಾಗಿ, ತ್ರಿಬಾಣಧಾರಿ 'ಬಾರ್ಬರಿಕ್' ಸಿನಿಮಾ ರೂಪುಗೊಳ್ಳುತ್ತಿದೆ. ಈ ಚಿತ್ರವನ್ನು ವಿಜಯಪಾಲ್ ರೆಡ್ಡಿ ಅಡಿಧಲ ನಿರ್ಮಿಸಿದರೆ, ಮೋಹನ್ ಶ್ರೀವತ್ಸ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಖ್ಯಾತ ನಿರ್ದೇಶಕ ಮಾರುತಿ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರದ ಮುಖ್ಯಪಾತ್ರದಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಳ್ಳಲಿದ್ದಾರೆ.
ಕಂಚಿನ ಕಂಠದಿಂದ ಸಿನಿಮಾರಂಗಲ್ಲಿ ಗುರುತಿಸಿಕೊಂಡಿರುವ ವಸಿಷ್ಠ ಸಿಂಹ ಕನ್ನಡ, ತೆಲುಗು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ತ್ರಿಬಾಣಧಾರಿ ಬಾರ್ಬರಿಕ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಇದರ ಮೂಲಕ ಚಿತ್ರದ ಕಥಾವಸ್ತುವನ್ನು ಪರಿಚಯಿಸಲಾಗಿದೆ. ಪೌರಾಣಿಕ ಮತ್ತು ಸಾಮಾಜಿಕ ಅಂಶಗಳು ಬೆರೆತಿರುವ ಕಥೆ ಇದಾಗಿದೆ. ಭೀಮನ ಮೊಮ್ಮಗ (ಘಟೋತ್ಕಚನ ಮಗ) ಬಾರ್ಬರಿಕನ ಕಥೆಯನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ನಡೆಯುತ್ತಿದೆ. ಮೂರು ಬಾಣಗಳನ್ನು ಏಕಕಾಲಕ್ಕೆ ಹೂಡುವ ಬಾರ್ಬರಿಕನ ಅದ್ಭುತ ಪರಾಕ್ರಮವನ್ನು ಈ ಮೋಷನ್ ಪೋಸ್ಟರ್ನಲ್ಲಿ ವಿವರಿಸಲಾಗಿದೆ. ಈ ಜಗತ್ತು ಗಮನಿಸದ ಒಬ್ಬ ಮಹಾವೀರನ ಕಥೆ ಇದು ಎಂದು ಈ ಪೋಸ್ಟರ್ ನಲ್ಲಿ ಬಣ್ಣಿಸಲಾಗಿದೆ.
ವಸಿಷ್ಟ ಜೊತೆಗೆ, ಸತ್ಯ ರಾಜ್, ಸಂಚಿ ರೈ, ಸತ್ಯನ್ ರಾಜೇಶ್, ಕ್ರಾಂತಿ ಕಿರಣ್, ಮೊಟ್ಟ ರಾಜೇಂದ್ರ, ವಿಟಿವಿ ಗಣೇಶ್, ಉದಯಭಾನು ಮುಂತಾದವರು ನಟಿಸಿದ್ದಾರೆ. ಕುಶೇಂದರ್ ರಮೇಶ್ ರೆಡ್ಡಿ ಛಾಯಾಗ್ರಹಣ, ಮಾರ್ತಾಂಡ್ ಕೆ ವೆಂಕಟೇಶ್ ಮತ್ತು ಶ್ರೀನಿವಾಸ್ ಪುನ್ನ ಕಲಾ ನಿರ್ದೇಶನ ಹಾಗ ರಾಮ್ ಸುಂಕರ ಸಾಹಸ ದೃಶ್ಯಗಳನ್ನು ನಿರ್ದೇಶಿಸಿದ್ದಾರೆ. ತ್ರಿಬಾಣಧಾರಿ ಬಾರ್ಬರಿಕ್ ಚಿತ್ರೀಕರಣವು ಮುಕ್ತಾಯಗೊಂಡಿದ್ದು, ಈಗ ಪೋಸ್ಟ್-ಪ್ರೊಡಕ್ಷನ್‌ನಲ್ಲಿದೆ.
Advertisement