ರಿಷಭ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಕಾಂತಾರ ಚಾಪ್ಟರ್ 1 ಬಿಡುಗಡೆಯ ದಿನಾಂಕ ಭಾನುವಾರ ಅಧಿಕೃತವಾಗಿ ಘೋಷಣೆಯಾಗಿದೆ. ಅಕ್ಟೋಬರ್ 2, 2025 ರಂದು ಚಿತ್ರ ತೆರೆಗೆ ಅಪ್ಪಳಿಸಲಿದೆ ಎಂದು ತಯಾರಕರು ಭಾನುವಾರ ತಿಳಿಸಿದ್ದಾರೆ.
ಹೊಂಬಾಳೆ ಫಿಲಂಸ್ ನಿರ್ಮಾಣದ 2022ರ ರಾಷ್ಟ್ರ ಪ್ರಶಸ್ತಿ ವಿಜೇತ ಪ್ಯಾನ್ ಇಂಡಿಯಾ 'ಕಾಂತಾರ' ಪ್ರಿಕ್ವೆಲ್ ಸಿನಿಮಾಕ್ಕೆ ರಿಷಭ್ ಶೆಟ್ಟಿ ಚಿತ್ರಕಥೆ ಬರೆದಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನಿರ್ಮಾಪಕರು ಚಿತ್ರ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿದ್ದಾರೆ.
ಮುಂದಿನ ವರ್ಷ ಅಕ್ಟೋಬರ್ 2ಕ್ಕೆ ಕಾಂತಾರ ಚಾಪ್ಟರ್ 1 ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ ಎಂದು ಮಾಹಿತಿ ನೀಡಲಾಗಿದೆ. ರಿಷಬ್ ಶೆಟ್ಟಿ ನಾಯಕ ನಟ ಹಾಗೂ ನಿರ್ದೇಶನದ ಚಿತ್ರವನ್ನು ಕುಂದಾಪುರದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಕಾಂತಾರ ಕಥೆಯು ಕರ್ನಾಟಕದ ದಕ್ಷಿಣ ಕರಾವಳಿಯ ಕಾಡುಬೆಟ್ಟು ಕಾಡಿನಲ್ಲಿ ವಾಸಿಸುವ ಒಂದು ಸಣ್ಣ ಸಮುದಾಯದ ಸುತ್ತಲೂ ಇದೆ.
16 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಕಾಂತಾರ ಪ್ರಪಂಚದಾದ್ಯಂತ 400 ಕೋಟಿ ರೂಪಾಯಿ ಗಳಿಸಿತ್ತು.ಇದು ಸಂಪೂರ್ಣ ಮನರಂಜನೆಯ ಜನಪ್ರಿಯ ಚಲನಚಿತ್ರವಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ರಿಷಭ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
Advertisement